

ಔರಾದ್: ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಸಾಧನೆ ಶೂನ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಸದರೂ ಆದ ಕೇಂದ್ರ ಸಚಿವ ಭಗವಂತ ಖೂಬಾ 10 ವರ್ಷಗಳಲ್ಲಿ ಬೀದರ್ ಲೋಕಸಭಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನೂ ಇಲ್ಲ. ಸಿಪೇಟ್ ತರುತ್ತೇನೆ ಎಂದು ಹೇಳಿದ್ದರೂ ತರಲಿಲ್ಲ. ಎಫ್ಎಂ ಕೇಂದ್ರ ಬರಲಿಲ್ಲ. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಿಸುತ್ತೇನೆ ಎಂದು ಗೃಹ ಸಚಿವ ಅಮಿತ್ ಷಾ ಮೂಲಕ ಕೊಡಿಸಿದ ಭರವಸೆಯೂ ಈಡೇರಿಲ್ಲ. ಬದಲಿಗೆ ಬಿಎಸ್ಸೆಸ್ಕೆ ನಾಶವಾಗಿದೆ ಎಂದು ಆರೋಪಿಸಿದರು.
ನೌಬಾದ್-ಭಾಲ್ಕಿ, ಔರಾದ್-ಬೀದರ್ ಹೆದ್ದಾರಿ ಕಾಮಗಾರಿ ಕಳಪೆ ಆಗಿದೆ. ಜಿಲ್ಲೆಯ ಜನ ಅವರ ದುರಹಂಕಾರ, ದರ್ಪ ನೋಡುತ್ತಿದ್ದಾರೆ. ಯಾರ ಜತೆಗೂ ನಡವಳಿಕೆ ಸರಿ ಇಲ್ಲ. ಜನ ಅವರಿಂದ ಬೇಸತ್ತು ಅಧಿಕಾರ ಅಂತ್ಯಗೊಳಿಸಲು ಸಿದ್ಧರಾಗಿದ್ದಾರೆ ಎಂದ ಖಂಡ್ರೆ, ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಯಂತೆ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಿ ಸಮರ್ಪಕವಾಗಿ ಜನರಿಗೆ ತಲುಪಿಸುವ ಕೆಲಸ ಮಾಡಿದೆ ಎಂದರು.
ಜಿಲ್ಲೆಯ ಮತದಾರರ ಆಶೀರ್ವಾದ, ವಿಶ್ವಾಸದೊಂದಿಗೆ ಸಾಗರ್ ಖಂಡ್ರೆ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕೋವಿಡ್ ಸಂಕಷ್ಟದಲ್ಲಿ ಸಾಗರ್ ಖಂಡ್ರೆ ಜನರಿಗೆ ಆಹಾರ ಕಿಟ್ ವಿತರಿಸಿ ಧೈರ್ಯ ತುಂಬಿದ್ದರು. ಕಾಂಗ್ರೆಸ್ ಸರ್ಕಾರ ಬಡವರು, ದುರ್ಬಲ ವರ್ಗದವರ ಪರವಾಗಿದೆ. ಕಾರ್ಯಕರ್ತರು ಪ್ರತಿಪಕ್ಷದವರ ಮಾತಿಗೆ ತಲೆಕೆಡಿಸಿಕೊಳ್ಳದೆ ಮನೆ ಮನೆಗೆ ಭೇಟಿ ನೀಡಿ ಸರ್ಕಾರದ ಸಾಧನೆಗಳ ತಿಳಿಹೇಳಿ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಮಾತನಾಡಿ, ನಾನು ಕೂಡ ಗ್ರಾಮೀಣ ಭಾಗದಲ್ಲೇ ವಾಸಿಸುವುದರಿಂದ ಜನರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿ ಸ್ಪಂದಿಸುವ ನಿಟ್ಟಿನಲ್ಲಿ ಅಳಿಲು ಸೇವೆ ಮಾಡಿರುವೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಕೋನ ಇಟ್ಟು ವರಿಷ್ಠರು ನನ್ನನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಜಿಲ್ಲೆಯ ಪ್ರಗತಿಗೆ ದುಡಿಯಲು ಬದ್ಧನಾಗಿರುವೆ. ಮತಬಾಂಧವರು ಆಶೀರ್ವದಿಸಿ ಗೆಲ್ಲಿಸಲಿದ್ದಾರೆ ಎಂದು ಹೇಳಿದರು.
ಪೌರಾಡಳಿತ ಸಚಿವ ರಹೀಮ್ ಖಾನ್ ಮಾತನಾಡಿ, ಲೋಕಸಭೆಗೆ ಕಾಂಗ್ರೆಸ್ ವರಿಷ್ಠರು ಕೇವಲ 26 ವರ್ಷದ ಕಾನೂನು ಪದವಿ ಮುಗಿಸಿದ ತರುಣ ಸಾಗರ್ ಖಂಡ್ರೆ ಅವರನ್ನು ಚುನಾವಣಾ ಕಣಕ್ಕಿಳಿಸಿದ್ದು ಹರ್ಷ ಮೂಡಿಸಿದೆ. ಅವರನ್ನು ಗೆಲ್ಲಿಸಿ ಜಿಲ್ಲೆಯ ಸಮಗ್ರ ವಿಕಾಸಕ್ಕಾಗಿ ಸಂಸತ್ಗೆ ಕಳುಹಿಸುವುದು ಜಿಲ್ಲೆಯ ಮತದಾರರ ಜವಾಬ್ದಾರಿ ಎಂದರು.
ಎಂಎಲ್ಸಿ ಭೀಮರಾವ್ ಪಾಟೀಲ್ ಮಾತನಾಡಿ, ನುಡಿದಂತೆ ನಡೆದ ಸಕರ್ಾರ ನಮ್ಮ ಕಾಂಗ್ರೆಸ್ ಸರ್ಕಾರ. ಸಮಾಜದ ಕಟ್ಟಕಡೆ ವ್ಯಕ್ತಿಗೂ ಗ್ಯಾರಂಟಿ ಯೋಜನೆಗಳ ಪ್ರಯೋಜನ ದೊರಕುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಸಾಗರ್ ಖಂಡ್ರೆ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬುರ್ಗೆ, ಪ್ರಮುಖರಾದ ಬಸವರಾಜ ಜಾಬಶೆಟ್ಟಿ, ಭೀಮಸೇನರಾವ ಸಿಂಧೆ, ಆನಂದ ಚವ್ಹಾಣ್, ವಿಜಯಕುಮಾರ ಕೌಡಾಳೆ, ಮೀನಾಕ್ಷಿ ಸಂಗ್ರಾಮ, ಗೀತಾ ಪಂಡಿತ ಚಿದ್ರಿ, ಅಮೃತರಾವ್ ಚಿಮಕೋಡೆ, ಬಸವರಾಜ ದೇಶಮುಖ, ಮಾಳಪ್ಪ ಅಡಸಾರೆ, ಕುಮಾರ ದೇಶಮುಖ, ರಾಜಕುಮಾರ ಕಂದಗೂಳೆ, ರಾಮಣ್ಣ ವಡೆಯರ್, ರತ್ನಮ್ಮ ಪಾಟೀಲ್, ಶರಣಪ್ಪ ಪಾಟೀಲ್, ಬಂಟಿ ದರ್ಬಾರೆ, ವಿಶ್ವನಾಥ ದೀನೆ, ಸುಧಾಕರ ಕೊಳ್ಳುರ, ದತ್ತಾತ್ರಿ ಬಾಪುರೆ, ಶಾಂತಕುಮಾರ ಬಿರಾದಾರ್, ಪ್ರವೀಣ ಕದಂ, ಡಿ.ಕೆ.ಚಂದು ಇತರರಿದ್ದರು.