ಪ್ರತಿ ಎಲೆಕ್ಷನ್ ನಲ್ಲಿ ಹಕ್ಕು ಚಲಾಯಿಸಿದ ಅಜ್ಜ

Ramrao Bhosle
Published on

ರೇವಣಸಿದ್ದಪ್ಪ ಪಾಟೀಲ್ ಬೀದರ್
ದೇಶದಲ್ಲಿ ನಡೆದ ಪ್ರಥಮ ಚುನಾವಣೆ (1952)ಯಿಂದ ಈವರೆಗಿನ ಎಲ್ಲ ಎಲೆಕ್ಷನ್ ಗಳಲ್ಲಿ ಈ ಅಜ್ಜ ಮತದಾನದ ಹಕ್ಕು ಚಲಾಯಿಸಿದ್ದಾರೆ. ಸದ್ಯ ಶತಯುಷಿಯಾಗಿದ್ದರೂ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಕಾತುರರಾಗಿದ್ದಾರೆ.
ಹೌದು. ಭಾಲ್ಕಿ ತಾಲೂಕಿನ ಗಣೇಶಪುರ ಗ್ರಾಮದ ರಾಮರಾವ ದಶರಥರಾವ ಭೋಸ್ಲೆ (100) 1952ರಲ್ಲಿ ನಡೆದ ಪ್ರಥಮ ಚುನಾವಣೆಯಿಂದ ಈವರೆಗಿನ ಲೋಕಸಭೆ, ವಿಧಾನಸಭೆ, ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಮತದಾನ ಹಕ್ಕು ಚಲಾಯಿಸಿ ಗಮನ ಸೆಳೆದಿದ್ದಾರೆ. 100ರ ಸಂಭ್ರಮದಲ್ಲಿರುವ ಅಜ್ಜಗೆ ಕಿವಿ ಕೇಳಿಸದು ಎಂಬುದನ್ನು ಬಿಟ್ಟರೆ ಗಟ್ಟಿಯಾಗಿರುವ ರಾಮರಾವ ಮತದಾನ ವಿಷಯದಲ್ಲಿ ಯುವ ಪಡೆಗೆ ಮಾದರಿ ಎನಿಸಿದ್ದಾರೆ.
1952ರ ಚುನಾವಣೆಯಲ್ಲಿ ರಾಮರಾವ ಅವರು ಹುಪಳಾ ಗ್ರಾಮದ ಬೂತ್ ನಲ್ಲಿ ವೋಟ್ ಮಾಡಿದ್ದರು. ಅಂದಿನಿಂದ ಈವರೆಗೆ ಎಲ್ಲ ಚುನಾವಣೆಗಳಲ್ಲಿ ಮತದಾನ ಹಕ್ಕಿನಿಂದ ತಪ್ಪಿಸಿಕೊಂಡಿಲ್ಲ. ಯಾವುದೇ ಸಂದರ್ಭ ಬಂದರೂ ಹಕ್ಕು ಚಲಾಯಿಸಿ ಹೋಗುತ್ತಿದ್ದರು.
ರಾಮರಾವ ಅವರು ಹೈದರಾಬಾದಿನ ನಿಜಾಮ ಆಡಳಿತದಲ್ಲಿ ಉರ್ದು ಮತ್ತು ಮೋಡಿಯಲ್ಲಿ ಶಿಕ್ಷಣ ಪೂರೈಸಿದ್ದಾರೆ. ನಂತರ ಕೆಲಕಾಲ ಘಾಟಬೋರಾಳದ ಪ್ರಕಾಶ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, 1950ರಲ್ಲಿ ಗ್ರಾಮ ಸೇವಕರಾಗಿ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಕೆಲಸಕ್ಕೆ ಸೇರಿದರು. 1956ರಲ್ಲಿ ರಾಜ್ಯ ವಿಂಗಡಣೆ ಆದಾಗಲೂ ರಾಮರಾವ ಮಹಾರಾಷ್ಟ್ರದಲ್ಲಿ ತಮ್ಮ ಕೆಲಸ ಮುಂದುವರಿಸಿದರು. ಆದರೆ ತಮ್ಮ ಮತದಾನ ಹಕ್ಕು ಮಾತ್ರ ತವರು ಜಿಲ್ಲೆಯಲ್ಲೇ ಇಟ್ಟುಕೊಂಡಿದ್ದು ಗಮನಾರ್ಹ.
1985ರಲ್ಲಿ ಸ್ವಯಂ ನಿವೃತ್ತಿ ಪಡೆದ ರಾಮರಾವ ಸ್ವಗ್ರಾಮಕ್ಕೆ ಆಗಮಿಸಿ ನೆಲೆಸಿದ್ದಾರೆ. ಎರಡು ವರ್ಷ ಹಿಂದೆ ಪತ್ನಿ ನಿಧನ ಹೊಂದಿದ್ದಾರೆ. ಮೂವರು ಮಕ್ಕಳು. ಹಿರಿಯ ಪುತ್ರ ಶಹಾಜಿ ಭೋಸ್ಲೆ ಶಿಕ್ಷಕರಾಗಿದ್ದು, ನಿವೃತ್ತರಾದ್ದಾರೆ. ಎರಡನೇ ಪುತ್ರ ಬಿಜೆಪಿ ಮುಖಂಡ ಶಿವಾಜಿ ಭೋಸ್ಲೆ ಕರೊನಾ ವೇಳೆ ಅಸುನೀಗಿದ್ದಾರೆ. ಪುತ್ರಿ ಸೋನುಬಾಯಿ ಅವರನ್ನು ಹುಮನಾಬಾದ್ ವರನ ಜತೆ ಮದುವೆ ಮಾಡಿಕೊಡಲಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ 1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಈವರೆಗೆ ನಡೆದ ಎಲ್ಲ ಎಲೆಕ್ಶನ್ ಗಳಲ್ಲಿ ಮತದಾನ ಮಾಡಿರುವೆ. ನಮಗೆ ಸಿಕ್ಕ ಸಂವಿಧಾನಬದ್ಧ ಹಕ್ಕು ಚಲಾವಣೆಯಿಂದ ಹಿಂದೆ ಸರಿಯಬಾರದು. ಮೇ 7ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಕಾತುರನಾಗಿರುವೆ ಎಂದು ರಾಮರಾವ ಭೋಸ್ಲೆ ವಿಜಯವಾಣಿಗೆ ತಿಳಿಸಿದ್ದಾರೆ.

ಯುವ ಮತದಾರರಿಗೆ ಮಾದರಿ
ಅಜ್ಜ ರಾಮರಾವ ಭೋಸ್ಲೆ ನಮಗೆ ಮಾದರಿ. ಶತಾಯುಷಿ ಆಗಿದ್ದರೂ ಗಟ್ಟಿಯಾಗಿದ್ದಾರೆ. ನಿತ್ಯ ದಿನಪತ್ರಿಕೆ ಓದುವ ಹವ್ಯಾಸ ಇದೆ. ಅಪಾರ ರಾಜಕೀಯ ಜ್ಞಾನ ಹೊಂದಿದ್ದು, ದೇಶದ ಆಗು-ಹೋಗುಗಳ ಮೇಲೆ ನಿಗಾ ಇಡುತ್ತಾರೆ. ಇಂದಿನ ಯುವ ಮತದಾರರಿಗೆ ಇವರು ಮಾದರಿ ಎಂದು ರಾಮರಾವ ಭೋಸ್ಲೆ ಸಂಬಂಧಿಯಾದ ಬಾಲಾಜಿ ಪವಾರ್ ತಿಳಿಸಿದ್ದಾರೆ.

85 ವರ್ಷ ಮೇಲ್ಪಟ್ಟ
14548 ಮತದಾರರು
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 14,548 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 18,45,429 ಮತದಾರರಿದ್ದು, ಇದರಲ್ಲಿ 85 ವರ್ಷ ಮೇಲ್ಪಟ್ಟವರು 14,548. ಬಸವಕಲ್ಯಾಣ 2769, ಹುಮನಾಬಾದ್ 2564, ಬೀದರ್ ದಕ್ಷಿಣ 2187, ಬೀದರ್ 1767, ಭಾಲ್ಕಿ 2746 ಹಾಗೂ ಔರಾದ್ ವಿಧಾನಸಭೆ ಕ್ಷೇತ್ರದಲ್ಲಿ 2515 ಮತದಾರರು 85 ವರ್ಷ ಮೇಲ್ಪಟ್ಟವರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net