

ಬೀದರ್: ಕೊಲೆ ಸೇರಿ ವಿವಿಧ ಅಪರಾಧ ಪ್ರಕರಣ ಭೇದಿಸುವಲ್ಲಿ ಜಿಲ್ಲಾ ಪೊಲೀಸ್ ಗೆ ನೆರವಾಗುವ ಮೂಲಕ ಮೆಚ್ಚುಗೆ ಗಳಿಸಿದ್ದ ಪೊಲೀಸ್ ಶ್ವಾನ ದಳದ ಬ್ರೂನೊ (11) ಭಾನುವಾರ ಅಸುನೀಗಿದೆ.
ಶುಕ್ರವಾರವರೆಗೆ ಕರ್ತವ್ಯ ನಿರ್ವಹಿಸಿದ ಬ್ರೂನೊ ಭಾನುವಾರ ಬೆಳಗ್ಗಿನ ಜಾವ ಕೊನೆಯುಸಿರೆಳೆದಿದೆ. 10 ವರ್ಷ 6 ತಿಂಗಳು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ಬ್ರೂನೊ ಗಣ್ಯರ ಆಗಮನ ಸೇರಿ ಬಂದೋಬಸ್ತ್ ಸಂದರ್ಭದಲ್ಲಿ ಸೋಟಕ ಪತ್ತೆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿತ್ತು.
ಇತ್ತೀಚೆಗೆ ಬೀದರ್ ಗ್ರಾಮೀಣ ಠಾಣೆಯಲ್ಲಿ ಮಹಿಳೆ ಕೊಲೆ ಪ್ರಕರಣ ನಡೆದಿತ್ತು. ಶವ ಸಿಕ್ಕ ಸ್ಥಳದ ಸಮೀಪದಲ್ಲೇ ಮೊಬೈಲ್ ಪತ್ತೆ ಮಾಡುವಲ್ಲಿ ಬ್ರೂನೊ ಯಶಸ್ವಿಯಾಗಿತ್ತು. ಇಂಥ ಹಲವು ಪ್ರಕರಣಗಳಲ್ಲಿ ಈ ಶ್ವಾನದ ನೆರವು ಇಲಾಖೆಗೆ ಬಹಳಷ್ಟಾಗಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.
ಬ್ರೂನೊ 2013ರ ಸೆ.17ರಂದು ಜನಿಸಿದ್ದು, ತರಬೇತಿ ಮುಗಿಸಿ ಜಿಲ್ಲಾ ಶ್ವಾನ ದಳಕ್ಕೆ 2015ರ ಜ.31ಕ್ಕೆ ಸೇರ್ಪಡೆಯಾಗಿದೆ. ರಾಷ್ಟ್ರಪತಿ, ಪ್ರಧಾನಿಮಂತ್ರಿ, ರಾಜ್ಯಪಾಲ, ಮುಖ್ಯಮಂತ್ರಿ ಸೇರಿ ಗಣ್ಯರು ಆಗಮನದ ಬಂದೋಬಸ್ತ್, ಮೈಸೂರು ದಸರಾ, ಬೆಳಗಾವಿ ಅವೇಶನ ಹಾಗೂ ಲೋಕಸಭೆ, ವಿಧಾನಸಭೆ ಚುನಾವಣೆ ಕೆಲಸವನ್ನು ಬ್ರೂನೊ ನಿರ್ವಹಿಸಿದೆ.
ಜಿಲ್ಲೆಯ ಎಎಸ್ಸಿ ತಂಡದ ಜತೆ ಸತತ ಕರ್ತವ್ಯ ನಿರ್ವಹಿಸುತ್ತಿದ್ದ ಬ್ರೂನೊ ದಿನನಿತ್ಯದ ಕೆಲಸ ನಿಭಾಯಿಸಿದೆ. ಅದರಲ್ಲೂ ಸೂಕ್ಷ್ಮ, ಅತಿ ಸೂಕ್ಷ್ಮ ಸ್ಥಳಗಳಾದ ವಿಮಾನ, ರೈಲ್ವೆ, ಬಸ್ ನಿಲ್ದಾಣ, ಜಿಲ್ಲಾ ನ್ಯಾಯಾಲಯ ಸಂಕೀರ್ಣ ಮತ್ತು ಸಂಶಯಾಸ್ಪದ ಸ್ಥಳಗಳ ಪರಿಶೀಲನಾ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಬ್ರೂನೊ ಹಿರಿಮೆ.
ವಲಯ ಮಟ್ಟದ ಕರ್ತವ್ಯ ಕೂಟದಲ್ಲಿ ಭಾಗಿಯಾಗಿ ಮೂರು ಸಲ ಪ್ರಥಮ, ಐದು ಬಾರಿ ಎರಡನೇ ಸ್ಥಾನ ಪಡೆದಿದೆ. ರಾಜ್ಯಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲೂ ಭಾಗಿಯಾಗಿ ವಿವಿಧ ಪ್ರಕರಣ ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆಗೆ ಬ್ರೂನೊ ನೆರವು ಅಪಾರ ಎಂದು ಅಧಿಕರಿಗಳು ಸ್ಮರಿಸಿದ್ದಾರೆ.
ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಮಧ್ಯಾಹ್ನ ಬ್ರೂನೊ ಅಂತ್ಯಕ್ರಿಯೆ ನೆರವೇರಿತು. ಪೊಲೀಸ್ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಗೋವಿಂದರಡ್ಡಿ, ಎಸ್ಪಿ ಚನ್ನಬಸವಣ್ಣ ಲಂಗೋಟಿ, ಹೆಚ್ಚುವರಿ ಎಸ್ಪಿಗಳಾದ ಮಹೇಶ ಮೇಘಣ್ಣವರ್, ಚಂದ್ರಕಾಂತ ಪೂಜಾರಿ ಸೇರಿ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.