

ಬೀದರ್: ಬೆಂಗಳೂರಿನಲ್ಲಿ ಫೆ. 27 ರಂದು ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲಾ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಮನವಿ ಮಾಡಿದ್ದಾರೆ.
ಈಗಾಗಲೇ 100 ಶಿಕ್ಷಕರು ಸಮ್ಮೇಳನಕ್ಕೆ ಬರಲು ಹೆಸರು ನೋಂದಾಯಿಸಿದ್ದಾರೆ. ರೈಲು, ಬಸ್ ಹಾಗೂ ಖಾಸಗಿ ವಾಹನಗಳಲ್ಲಿ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿರುವ ಸಮ್ಮೇಳನವು ಏಳನೇ ವೇತನ ಆಯೋಗದ ಶಿಫಾರಸು ಅನುಷ್ಠಾನ, ಹಳೆಯ ಪಿಂಚಣಿ ಯೋಜನೆ, ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವುದು ಸೇರಿದಂತೆ ನೌಕರರ ವಿವಿಧ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲಿದೆ ಎಂದು ಹೇಳಿದ್ದಾರೆ.