ಸಮಸ್ಯೆಗಳಿಗೆ ಮಾನವನ ದುರಾಸೆ ಕಾರಣ

jamborette 1
Published on

ಬೀದರ್: ಸಮಾಜದಲ್ಲಿನ ಅನೇಕ ಸಮಸ್ಯೆಗಳಿಗೆ ಮಾನವನ ದುರಾಸೆಯೇ ಕಾರಣವಾಗಿದೆ ಎಂದು ನಿವೃತ್ತ ಲೋಕಾಯುಕ್ತ ಸಂತೋಷ ಹೆಗಡೆ ಅಭಿಪ್ರಾಯಪಟ್ಟರು.
ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಪ್ರಥಮ ಜಾಂಬೊರೇಟ್‍ನಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. 1950 ರ ದಶಕದಲ್ಲಿ ಅಧಿಕಾರದಲ್ಲಿದ್ದ ಕೆಲವೇ ಕೆಲವರು ರೂ. 52 ಲಕ್ಷ ಕೊಳ್ಳೆ ಹೊಡೆದಿದ್ದ ‘ಜೀಪ್’ ಹಗರಣ ಬಯಲಿಗೆ ಬಂದಿತ್ತು. ನಂತರ ಬೋಫೋರ್ಸ್, ಕಾಮನ್‍ವೆಲ್ತ್ ಕ್ರೀಡಾಕೂಟ ಮೊದಲಾದ ಹಗರಣಗಳು ನಡೆದಿದ್ದವು. ಆದರೆ, ಈಗ ವರ್ಷದಲ್ಲಿ ನೂರಾರು ಹಗರಣಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದೆ ತಪ್ಪು ಮಾಡಿದವರನ್ನು ಸಮಾಜ ಬಹಿಷ್ಕರಿಸುತ್ತಿತ್ತು. ಜೈಲಿಗೆ ಹೋಗಿ ಬಂದವರ ಮನೆ ಸಮೀಪವೂ ಹೋಗದಂತೆ ಪಾಲಕರು ಮಕ್ಕಳನ್ನು ಎಚ್ಚರಿಸುತ್ತಿದ್ದರು. ಕಾರಣ, ತಪ್ಪು ಮಾಡಲು ಜನ ಹೆದರುತ್ತಿದ್ದರು ಎಂದು ತಿಳಿಸಿದರು.
ಈಗ ಸಮಾಜದ ಭಾವನೆಯಲ್ಲಿ ಬದಲಾವಣೆ ಆಗಿದೆ. ಶ್ರೀಮಂತರಿಗೆ, ಅಧಿಕಾರದಲ್ಲಿ ಇದ್ದವರಿಗೆ ಸಮಾಜ ಸಲಾಂ ಮಾಡುತ್ತಿದೆ. ಪ್ರಾಮಾಣಿಕರ ಬಗ್ಗೆ ಮಾತನಾಡಿದರೆ ಅವರು ಹುಚ್ಚರು, ತಾನೂ ತಿನ್ನವುದಿಲ್ಲ, ತಿನ್ನುವುದಕ್ಕೂ ಬಿಡುವುದಿಲ್ಲ ಎನ್ನುವ ಮಾತುಗಳು ಸರ್ವೇ ಸಾಮಾನ್ಯವಾಗಿವೆ ಎಂದು ನುಡಿದರು. ದುರಾಸೆಯಿಂದ ಮಾಡಿದ ಹಣದಿಂದ ಜೀವನದಲ್ಲಿ ಸಂತಸ ಸಿಗಲು ಸಾಧ್ಯವಿಲ್ಲ. ಇದ್ದದ್ದರಲ್ಲೇ ತೃಪ್ತಿ ಪಟ್ಟುಕೊಳ್ಳುವ ಗುಣ ಮೈಗೂಡಿಸಿಕೊಂಡಲ್ಲಿ ದುರಾಸೆಯನ್ನು ಮಟ್ಟ ಹಾಕಬಹುದು. ನೆಮ್ಮದಿ ಜೀವನ ಸಾಗಿಸಬಹುದು ಎಂದು ಹೇಳಿದರು.
ಸಮಾಜದಲ್ಲಿ ಶಾಂತಿ, ಸೌಹಾರ್ದಕ್ಕಾಗಿ ಮಾನವೀಯತೆ ಅವಶ್ಯಕವಾಗಿದೆ. ಮಕ್ಕಳಿಗೆ ನೈತಿಕತೆ ಪಾಠ ಬೋಧಿಸಬೇಕಿದೆ ಎಂದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯ, ಜಾಂಬೊರೇಟ್ ಮುಖ್ಯಸ್ಥ ಡಾ. ಅಬ್ದುಲ್ ಖದೀರ್, ಹೆಚ್ಚುವರಿ ಮುಖ್ಯಸ್ಥೆ ಗುರಮ್ಮ ಸಿದ್ಧಾರೆಡ್ಡಿ, ಸಂಯೋಜಕಿ ಮಲ್ಲೇಶ್ವರಿ ಜುಜಾರೆ,  ಪ್ರಧಾನ ಕಾರ್ಯದರ್ಶಿ ಡಾ. ಎಚ್.ಬಿ. ಭರಶೆಟ್ಟಿ, ಖಜಾಂಚಿ ತೌಸಿಫ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net