

ಬೀದರ್: ನಗರದ ಶಹಾಪುರ ಗೇಟ್ ಸಮೀಪದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಆವರಣದಲ್ಲಿ ಕಲ್ಯಾಣ ಕರ್ನಾಟಕ ಪ್ರಥಮ ಜಾಂಬೊರೇಟ್ ಪ್ರಯುಕ್ತ ಭಾನುವಾರ ನಡೆದ ಪಥ ಸಂಚಲನ ಗಮನ ಸೆಳೆಯಿತು.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಶಿಸ್ತಿನಿಂದ ಪಥ ಸಂಚಲನ ನಡೆಸಿದರು.
ಎರೊಬಿಕ್ ವ್ಯಾಯಾಮ, ಬ್ಯಾಂಡ್ ಸೆಟ್ ಪ್ರದರ್ಶನ, ಕಲರ್ ಪಾರ್ಟಿ ಮೊದಲಾದ ಚಟುವಟಿಕೆಗಳು ಜರುಗಿದವು.
ವಿದ್ಯಾರ್ಥಿಗಳು ಮೂರು ಪ್ರತ್ಯೇಕ ತಂಡಗಳಲ್ಲಿ ಸಾಹಸ ಪ್ರದರ್ಶನ, ಐತಿಹಾಸಿಕ ಸ್ಥಳಗಳ ಭೇಟಿ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಮಂಕಿ ಕ್ರಾವಲಿಂಗ್, ಮಂಕಿ ಬ್ರಿಡ್ಜ್, ಕಮಾಂಡೊ ಬ್ರಿಡ್ಜ್, ಟೈರ್ ಗೋಡೆ, ವೀಕ್ಷಣಾ ಗೋಪುರ ಹತ್ತಿ ಪ್ರತಿಭೆ ಪ್ರದರ್ಶಿಸಿದರು.
ಬೆಂಕಿ ಇಲ್ಲದೆ ಅಡುಗೆ ತಯಾರಿಕೆ, ಪೇಪರ್ ಕಟ್ಟಿಂಗ್, ಮೆಹಂದಿ, ರಂಗೋಲಿ, ಮಣ್ಣಿನ ಮಾದರಿ, ರಸಪ್ರಶ್ನೆ ಮೊದಲಾದ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯ, ಜಾಂಬೊರೇಟ್ ಮುಖ್ಯಸ್ಥ ಡಾ. ಅಬ್ದುಲ್ ಖದೀರ್, ಹೆಚ್ಚುವರಿ ಮುಖ್ಯಸ್ಥೆ ಗುರಮ್ಮ ಸಿದ್ಧಾರೆಡ್ಡಿ, ಸಂಯೋಜಕಿ ಮಲ್ಲೇಶ್ವರಿ ಜುಜಾರೆ, ಪ್ರಧಾನ ಕಾರ್ಯದರ್ಶಿ ಡಾ. ಎಚ್.ಬಿ. ಭರಶೆಟ್ಟಿ, ಖಜಾಂಚಿ ತೌಸಿಫ್ ಮತ್ತಿತರರು ಇದ್ದರು.