ಕರ್ನಾಟಕ ಸುವರ್ಣ ಸಂಭ್ರಮ ಆರ್ಥಪೂರ್ಣ ಆಚರಣೆ

Arunodaya School
Published on

ಬೀದರ್: ಕರ್ನಾಟಕ ಸುವರ್ಣ ಸಂಭ್ರಮವನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಯುವ ಘಟಕದ ಅಧ್ಯಕ್ಷ ಗುರುನಾಥ ರಾಜಗೀರಾ ಹೇಳಿದರು.
ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ಋಷಿಕೇಶ ಶಿಕ್ಷಣ ಸಂಸ್ಥೆ ಸಂಚಾಲಿತ ನಗರದ ಅರುಣೋದಯ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಯುವ ಘಟಕ, ಮಾತೃಭೂಮಿ ಸೇವಾ ಪ್ರತಿಷ್ಠಾನ, ಅರುಣೋದಯ ಶಾಲೆ ಹಾಗೂ ಸಮರ್ಥ ಕರ್ನಾಟಕ ಸೇವಾ ಸಂಸ್ಥೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಏಳನೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೈಸೂರು ರಾಜ್ಯ ಕರ್ನಾಟಕ ಆಗಿ 50 ವರ್ಷ ಪೂರ್ಣವಾದ ನಿಮಿತ್ತ ಕರ್ನಾಟಕ ಸುವರ್ಣ ಸಂಭ್ರಮ ಆಚರಿಸಲಾಗುತ್ತಿದೆ. ಈ ಪ್ರಯುಕ್ತ ಜಿಲ್ಲೆಯಾದ್ಯಂತ 50 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ನಿಜಾಮರ ಹೈದರಾಬಾದ್ ರಾಜ್ಯ, ಬಾಂಬೆ ಪ್ರೆಸಿಡೆನ್ಸಿಯ ಜಿಲ್ಲೆಗಳು ಹಾಗೂ ಮೈಸೂರು ಪ್ರದೇಶದ ಜಿಲ್ಲೆಗಳನ್ನು ಸೇರಿಸಿ ಕರ್ನಾಟಕ ರಾಜ್ಯವೆಂದು ಘೋಷಿಸಿದರು ಎಂದು ಹೇಳಿದರು.
ಶಾಲೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕರ್ನಾಟಕ ಸುವರ್ಣ ಸಂಭ್ರಮದ ನಿಮಿತ್ತ ವಿವಿಧ ಕಾರ್ಯಕ್ರಮಗಳ ಮೂಲಕ ಕನ್ನಡಾಭಿಮಾನ ಮೂಡಿಸುತ್ತಿರುವುದು ಸಂತಸದ ಸಂಗತಿ ಎಂದರು.
ಮುಖ್ಯಶಿಕ್ಷಕರಾದ ಈಶ್ವರಿ ಬೇಲೂರೆ, ಬಸವರಾಜ ಮುಗುಟಾಪುರೆ ಮೊದಲಾದವರು ಇದ್ದರು. ಶಿಕ್ಷಕಿ ಅಲ್ಕಾವತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net