ಜಿಲ್ಲಾ ಕನ್ನಡ ಭವನ ಉದ್ಘಾಟನೆಗೆ ಅಣಿ

Kannada Bhavan
Published on

ಬೀದರ್: ಇಲ್ಲಿಯ ಗುರುದ್ವಾರ-ಚಿಕ್ಕಪೇಟೆ ರಿಂಗ್ ರಸ್ತೆ ಬದಿಯಲ್ಲಿ ನಿರ್ಮಿಸಿರುವ ನೂತನ ಜಿಲ್ಲಾ ಕನ್ನಡ ಭವನ ಉದ್ಘಾಟನೆಗೆ ಅಣಿಯಾಗಿದೆ.
ಒಂದು ಎಕರೆಯಷ್ಟು ವಿಶಾಲ ಜಾಗದಲ್ಲಿ ಎರಡು ಅಂತಸ್ತಿನ ಸುಸಜ್ಜಿತ ಭವನ ತಲೆ ಎತ್ತಿದೆ.
ನೆಲಮಹಡಿಯು ಆರ್ಟ್ ಗ್ಯಾಲರಿ, ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಕಚೇರಿ, ಮೊದಲ ಮಹಡಿ ಗ್ರಂಥಾಲಯ, ಅತಿಥಿಗಳು, ಕಲಾವಿದರ ವಸತಿ ಕೋಣೆಗಳು ಹಾಗೂ ಮೂರನೇ ಮಹಡಿ ಏಕಕಾಲಕ್ಕೆ 500 ಜನ ಕುಳಿತುಕೊಳ್ಳಬಹುದಾದ ಸಭಾ ಭವನ ಒಳಗೊಂಡಿದೆ.
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ರೂ. 2 ಕೋಟಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ರೂ. 25 ಲಕ್ಷ, ಕೇಂದ್ರ ಸಚಿವ ಭಗವಂತ ಖೂಬಾ ಅವರ ನಿಧಿಯ ರೂ. 10 ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಅವರ ನಿಧಿಯ ರೂ. 5 ಲಕ್ಷ ಅನುದಾನ ಸೇರಿ ಒಟ್ಟು ರೂ. 2.40 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣಗೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದರು.
ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು ಎನ್ನುವುದು ಕನ್ನಡಾಭಿಮಾನಿಗಳ ಬಹುದಿನಗಳ ಕನಸಾಗಿತ್ತು. ಅದು ನನ್ನ ಅವಧಿಯಲ್ಲಿ ಸಾಕಾರಗೊಂಡಿರುವುದು ಹೆಮ್ಮೆ ಉಂಟು ಮಾಡಿದೆ. ಎಲ್ಲರ ಸಹಕಾರದಿಂದ ಸುಂದರ ಭವನ ನಿರ್ಮಾಣ ಸಾಧ್ಯವಾಗಿದೆ ಎಂದು ಹೇಳಿದರು.
ಪರಿಷತ್ ಸದಸ್ಯರಿಗೆ ಕೊಟ್ಟ ಭರವಸೆಯಂತೆ ಭವನ ನಿರ್ಮಿಸಿದ ಸಂತೃಪ್ತಿ ನನಗಿದೆ. ಕಳೆದ ಅವಧಿಯಲ್ಲಿ ಭವನಕ್ಕೆ ನಿವೇಶನ ಮಂಜೂರು ಮಾಡಿಸಿದ್ದೆ. ಎರಡನೇ ಅವಧಿಯ ಎರಡು ವರ್ಷಗಳಲ್ಲೇ ಭವನ ನಿರ್ಮಾಣ ಪೂರ್ಣಗೊಳಿಸಿದ್ದೇನೆ ಎಂದು ತಿಳಿಸಿದರು.
ಭವನವು ಕನ್ನಡ ಪರ ಚಟುವಟಿಕೆಗಳಿಗೆ ವೇದಿಕೆಯಾಗಲಿದೆ. ಕನ್ನಡ ಚಟುವಟಿಕೆಗಳನ್ನು ಇನ್ನಷ್ಟು ಉತ್ಸಾಹದಿಂದ ನಡೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಭವನ ನಿರ್ಮಾಣಕ್ಕೆ ಹಿಂದೆ ಮೂರು ಸ್ಥಳಗಳನ್ನು ಗುರುತಿಸಲಾಗಿತ್ತು. ಕಾರಣಾಂತರದಿಂದ ಅಲ್ಲಿ ಭವನ ನಿರ್ಮಾಣ ಕೈಬಿಡಲಾಯಿತು. ಈಗ ನಿರ್ಮಾಣಗೊಂಡಿರುವ ಭವನದ ಸ್ಥಳ ನಾಲ್ಕನೆಯದ್ದಾಗಿದೆ ಎಂದು ಹೇಳಿದರು.
ಕನ್ನಡ ಭವನ ಒಟ್ಟು ರೂ. 8 ಕೋಟಿಯ ಯೋಜನೆಯಾಗಿದೆ. ಈಗ ಮೊದಲ ಹಂತದ ಯೋಜನೆ ಪೂರ್ಣಗೊಂಡಿದೆ. ಬಯಲು ರಂಗ ಮಂದಿರ, ಸಾವಿರ ಜನ ಕುಳಿತುಕೊಳ್ಳಬಹುದಾದ ಸಭಾ ಭವನ, ಕನ್ನಡ ವನ ನಿರ್ಮಾಣ ಮೊದಲಾದವು ಎರಡನೇ ಹಾಗೂ ಮೂರನೇ ಹಂತದ ಯೋಜನೆಗಳಾಗಿವೆ ಎಂದು ವಿವರಿಸಿದರು.

ಭರದ ಸಿದ್ಧತೆ: ಫೆ. 3 ರಂದು ಬೆಳಿಗ್ಗೆ 11ಕ್ಕೆ ಭವನ ಉದ್ಘಾಟನೆಗೊಳ್ಳಲಿದೆ. ಎರಡು ದಿನ ಮಾತ್ರ ಬಾಕಿ ಇರುವುದರಿಂದ ಭರದ ಸಿದ್ಧತೆಗಳು ನಡೆದಿವೆ ಎಂದು ಸುರೇಶ ಚನಶೆಟ್ಟಿ ತಿಳಿಸಿದರು.
ಈಗಾಗಲೇ ಭವನದ ಪರಿಸರ ಸಂಪೂರ್ಣ ಶುಚಿಗೊಳಿಸಲಾಗಿದೆ. ಭವನದ ಮುಂಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಬೃಹತ್ ಶಾಮಿಯಾನ ಹಾಕಲಾಗುತ್ತಿದೆ. ಉದ್ಘಾಟನೆ ಸಮಾರಂಭ ಅರ್ಥಪೂರ್ಣವಾಗಿಸುವ ದಿಸೆಯಲ್ಲಿ ಪರಿಷತ್ ತಂಡ ಅಂತಿಮ ಹಂತದ ಸಿದ್ಧತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಬೆಳಿಗ್ಗೆ ಉದ್ಘಾಟನೆ ಸಮಾರಂಭ ಜರುಗಲಿದೆ. ಮಧ್ಯಾಹ್ನ ಕರ್ನಾಟಕ ಸುವರ್ಣ ಸಂಭ್ರಮದ ನಿಮಿತ್ತ ಕವಿಗೋಷ್ಠಿ ನಡೆಯಲಿದೆ. 50 ಕವಿಗಳು ಸ್ವರಚಿತ ಕವನ ವಾಚಿಸಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net