

ಬೀದರ್: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದ ಬಹುತೇಕ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸುತ್ತಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ವೇದಿಕೆಯ ಪದಾಧಿಕಾರಿಗಳು ಬುಧವಾರ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಅವರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ಡಾ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯ ಅನ್ವಯ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರ, ವೈದ್ಯರ ವಸತಿ ಗೃಹ, ಶಾಲಾ ಕೋಣೆ, ಅಂಗನವಾಡಿ, ಗ್ರಂಥಾಲಯ ಕಟ್ಟಡ, ಗ್ರಾಮೀಣ ಸಂಪರ್ಕ ರಸ್ತೆ, ಸಿಸಿ ರಸ್ತೆ, ಶಾಲಾ ಸುತ್ತುಗೋಡೆ ನಿರ್ಮಾಣ ಮೊದಲಾದ ಮಂಡಳಿಯ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರವೊಂದರ ಮೂಲಕವೇ ಅನುಷ್ಠಾನಗೊಳಿಸುತ್ತಿರುವುದು ಖಂಡನೀಯ ಎಂದು ಹೇಳಿದರು.
ಕೆಲ ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕೆ ಅನುದಾನ ದುರುಪಯೋಗ ಪಡೆಸಿಕೊಳ್ಳುತ್ತಿರುವುದು ಮೇಲ್ನೊಟಕ್ಕೆ ಕಂಡು ಬಂದಿದೆ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳನ್ನು ಕೇಂದ್ರದ ಮೂಲಕವೇ ಅನುಷ್ಠಾನಗೊಳಿಸಲು ಮುಂದಾಗಿರುವುದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಏಕೈಕ ಕೇಂದ್ರದಿಂದ ನೂರಾರು ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಕೈಗೊಳ್ಳಲು ಆಗುವುದಿಲ್ಲ. ಈಗಾಗಲೇ ನಿರ್ಮಿತಿ ಕೇಂದ್ರದ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪಗಳಿವೆ. ಕೇಂದ್ರವನ್ನು ಕಪ್ಪು ಪಟ್ಟಿಗೆ ಸೇರಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ತಿಳಿಸಿದರು.
ಮಂಡಳಿಯ ಅನುದಾನದ ಕಾಮಗಾರಿಗಳನ್ನು ಲೋಕೋಪಯೋಗಿ, ಪಂಚಾಯತ್‍ರಾಜ್ ಎಂಜಿನಿಯರಿಂಗ್ ವಿಭಾಗ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಸೇರಿದಂತೆ ಆಯಾ ಇಲಾಖೆಗಳಿಂದಲೇ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ವೇದಿಕೆಯ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂಬರುವ ವಿಧಾನ ಮಂಡಲ ಅಧಿವೇಶನದ ವೇಳೆ ಬೆಂಗಳೂರಿನನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ, ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿಶ್ವನಾಥ ಗೌಡ,
ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಸುಭಾಷ್ ಗಾಯಕವಾಡ್, ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ವೀರಶೆಟ್ಟಿ ಗೌಸಪುರ, ಉತ್ತರ ಘಟಕದ ಅಧ್ಯಕ್ಷ ಸಚಿನ್ ಜಟಗೊಂಡ, ಪ್ರಮುಖರಾದ ನವಿನ್ ಬುಧೇರಾ, ವಿಶ್ವನಾಥ ಆಲೂರೆ, ಉದಯಕುಮಾರ ಅಷ್ಟೂರೆ, ಸಂತೋಷ ಚೆಟ್ಟಿ, ಮಲ್ಲಿಕಾರ್ಜುನ ಸಿಕೇನಪುರೆ, ಮಾಳಸಕಾಂತ ವಾಗೆ, ರಾಜಕುಮಾರ ಎಡವೆ, ರಾಕೇಶ ಶಾಹುಜಿ, ಸುಧಾಕರ್ ರಾಠೋಡ್, ಜಮೀಲ್ ಪಟೇಲ್, ನಾಗೇಶ ಬಾವಗೆ, ವಿವೇಕ ನಿರ್ಮಳೆ, ಶಿವಣ್ಣ ಮೇತ್ರೆ, ಆನಂದ ಕಮಲಗರ, ರಾಕೇಶ, ಅಲ್ಲಾಬಕ್ಷ ಹೊನ್ನಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.