

ಬೀದರ್: ಮನುಷ್ಯನಲ್ಲಿ ಹೊಸ ಚೈತನ್ಯ ತುಂಬುವ ಶಕ್ತಿ ಸಂಗೀತಕ್ಕೆ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.
ದಾಸೋಹ ದಿನದ ಪ್ರಯುಕ್ತ ಸಿದ್ಧಗಂಗಾ ಶ್ರೀ ಕಲಾ ಮತ್ತು ಸಾಂಸ್ಕತಿಕ ಸಂಘದ ವತಿಯಿಂದ ಇಲ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಸಮೀಪದ ಮಹಾಲಕ್ಷ್ಮಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಹಾಗೂ ಸಾಂಸ್ಕøತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ಅನುಭವಿಸುವಂಥದ್ದು. ಅದರ ನಿಜ ಆನಂದ ಮಾತುಗಳಲ್ಲಿ ವರ್ಣಿಸಲಾಗದು ಎಂದು ನುಡಿದರು.
ಸಂಗೀತ ಅನೇಕ ರೋಗಗಳಿಗೆ ಔಷಧಿಯಾಗಿದೆ ಎಂದು ಡಾ. ಅಜೀತಕುಮಾರ ಶಾಸ್ತ್ರಿ ಹೇಳಿದರು.
ಸಂಗೀತ ಮನುಷ್ಯನನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತದೆ. ಕಠಿಣ ಪರಿಸ್ಥಿತಿ ಎದುರಿಸುವ ಶಕ್ತಿ ನೀಡುತ್ತದೆ ಎಂದು ಸಿದ್ಧಗಂಗಾ ಶ್ರೀ ಸಂಗೀತ ಶಾಲೆಯ ಶಿಕ್ಷಕಿ ಪ್ರೊ. ರೇಣುಕಾ ಎಂ. ಮಳ್ಳಿ ತಿಳಿಸಿದರು.
ಸಂಘದ ಅಧ್ಯಕ್ಷ ಮಹಾರುದ್ರಯ್ಯ ಮಳ್ಳಿ, ಪ್ರಮುಖರಾದ ವಿಜಯಕುಮಾರ ಪಾಟೀಲ ಗಾದಗಿ, ದೇವಿದಾಸ ಜೋಶಿ, ವೀರಯ್ಯ ಆರ್. ಪೂಜಾರಿ, ಮಹಾಲಿಂಗ ಸ್ವಾಮಿ ಚಟ್ನಳ್ಳಿ ಮಾತನಾಡಿದರು.
ಕಲಾವಿದರಾದ ಚನ್ನಬಸಪ್ಪ ನೌಬಾದೆ, ವಚನಶ್ರೀ ನೌಬಾದೆ, ವಿಠ್ಠಲರಾವ್ ಸ್ವಾಮಿ, ನಂದಿನಿ ಆರ್. ಸ್ವಾಮಿ, ರೇಣಸಿದ್ದಯ್ಯ ಪಾಟೀಲ, ಶ್ರೀನಿಧಿ ಎಂ. ಮಳ್ಳಿ ಸಂಗೀತ ನಡೆಸಿಕೊಟ್ಟರು.
ಶ್ರೀದೇವಿ ಸೋಮಶೆಟ್ಟಿ ನಿರೂಪಿಸಿದರು. ಪ್ರೊ. ಬಸವರಾಜ ಬಿರಾದಾರ ಸ್ವಾಗತಿಸಿದರು. ಪ್ರೊ. ಸ್ವರೂಪ ಎಸ್. ನಾಗೂರೆ ವಂದಿಸಿದರು.