

ಬೀದರ್: ಶೋಷಿತರ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ ವಿತರಿಸಲು ಬೀದರ್‍ನ ಸ್ವಾದಿಷ್ಟ ಲಾಡು ಶನಿವಾರ ಚಿತ್ರದುರ್ಗಕ್ಕೆ ರವಾನೆ ಆಯಿತು.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಬೀದರ್‍ನಿಂದ ಟೆಂಪೊ ಮೂಲಕ ಚಿತ್ರದುರ್ಗಕ್ಕೆ ಲಾಡು ಕಳುಹಿಸಿದರು.
ಮನ್ನಾನ್ ಸೇಠ್ ಅವರು ಬೀದರ್ ಹಾಗೂ ಚಿತ್ರದುರ್ಗದಲ್ಲಿ ತಲಾ 10 ಕ್ವಿಂಟಲ್ ಸೇರಿ ಒಟ್ಟು 20 ಕ್ವಿಂಟಲ್ ಲಾಡು ಮಾಡಿಸಿದ್ದಾರೆ.
ಸಮಾವೇಶದಲ್ಲಿ ಭಾಗವಹಿಸುವವರಿಗೆ ಸಿಹಿಯೊಂದಿಗೆ ಊಟದ ವ್ಯವಸ್ಥೆ ಮಾಡಲು ವೈಯಕ್ತಿಕವಾಗಿ ಆರ್ಡರ್ ನೀಡಿ, ಲಾಡು ಮಾಡಿಸಿದ್ದೇನೆ ಎಂದು ಅಬ್ದುಲ್ ಮನ್ನಾನ್ ಸೇಠ್ ತಿಳಿಸಿದರು.
ಎಚ್. ಕಾಂತರಾಜು ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಅಂಗೀಕರಿಸಿ, ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಸಮಾವೇಶ ವಿವಿಧ ಬೇಡಿಕೆಗಳ ಮೇಲೆ ಬೆಳಕು ಚೆಲ್ಲಲಿದೆ ಎಂದು ಹೇಳಿದರು.
ಮುಖಂಡರಾದ ಬಸವರಾಜ ಮಾಳಗೆ, ನಾರಾಯಣ ಗಣೇಶ, ಬಾಬು ಪಾಸ್ವಾನ್, ಅಂಬಾದಾಸ ಗಾಯಕವಾಡ್, ಸುಭಾಷ್ ಟಿಳ್ಳೆಕರ್ ಮುಂತಾದವರು ಇದ್ದರು.