

ಬೀದರ್: ಪ್ರೌಢಶಾಲಾ ಸಹ ಶಿಕ್ಷಕರಿಗೆ ಸಕಾಲಕ್ಕೆ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಬೀದರ್ ತಾಲ್ಲೂಕು ಘಟಕ ಒತ್ತಾಯಿಸಿದೆ.
ತಾಲ್ಲೂಕು ಘಟಕದ ಪದಾಧಿಕಾರಿಗಳು ನಗರದಲ್ಲಿ ನಿಯೋಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಖಿಲಾಂಡೇಶ್ವರಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಕಾಲಮಿತಿ, ಸ್ವಯಂ ಚಾಲಿತ, ವಿಶೇಷ ವೇತನ ಬಡ್ತಿ ಮಂಜೂರಾತಿ ಪ್ರಸ್ತಾವಗಳನ್ನು ಕೂಡಲೇ ಉಪ ನಿರ್ದೇಶಕರಿಗೆ ಸಲ್ಲಿಸಬೇಕು. ಸೇವಾ ಪುಸ್ತಕ ನಿರ್ವಹಣೆಗೆ ಮುಖ್ಯಶಿಕ್ಷಕರಿಗೆ ತರಬೇತಿ ನೀಡಬೇಕು. 2023-24ನೇ ಸಾಲಿನ ತುಟ್ಟಿಭತ್ಯೆ, ಕ್ರೀಡಾ ಭತ್ಯೆ, ಗಳಿಕೆ ರಜೆ, ವೈದ್ಯಕೀಯ ಬಿಲ್, ಹಬ್ಬದ ಮುಂಗಡ, ಕಂಪ್ಯೂಟರ್ ಮುಂಗಡ ಹಣ ಮಂಜೂರು ಮಾಡಬೇಕು. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಸರ್ಕಾರದ ಧನ ಸಹಾಯ ಒದಗಿಸಿಕೊಡಬೇಕು. ತಾಲ್ಲೂಕಿನಲ್ಲಿ ಸರ್ಕಾರಿ, ಅ ನುದಾನಿತ ಸಹ ಶಿಕ್ಷಕರಿಗೆ ಗುರುಸ್ಪಂದನೆ ಕಾರ್ಯಕ್ರಮ ಏರ್ಪಡಿಸಬೇಕು. ನಿವೃತ್ತರಾಗುವ ಶಿಕ್ಷಕರಿಗೆ ಗಳಿಕೆ ರಜೆ ಹಾಗೂ ಇತರ ಸೌಲಭ್ಯ ಸರಿಯಾದ ಸಮಯಕ್ಕೆ ದೊರಕಿಸಿಕೊಡಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ತಾಲ್ಲೂಕಿನ ಮುಖ್ಯಶಿಕ್ಷಕರು, ಸಂಘದ ಸದಸ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಬೇಕು ಎಂದು ಬೇಡಿಕೆ ಮಂಡಿಸಿದರು.
ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷೆ ಅರ್ಷಿಯಾ ಜಬೀನ್ ನಿಯೋಗದ ನೇತೃತ್ವ ವಹಿಸಿದ್ದರು. ತಾಲ್ಲೂಕು ಘಟಕದ ಗೌರವಾಧ್ಯಕ್ಷ ಎಡಿಸನ್ ಜೋಸೆಫ್, ಕಾರ್ಯದರ್ಶಿ ಗಣೇಶ ಬಿರಾದಾರ, ಸಹ ಕಾರ್ಯದರ್ಶಿ ಎಂ.ಡಿ. ತಾಜೊದ್ದಿನ್, ಸಂಘಟನಾ ಕಾರ್ಯದರ್ಶಿ ಚಿದಂಬರೇಶ್ವರಿ, ಖಜಾಂಚಿ ಬಸಪ್ಪ ಪೂಜಾರಿ, ರಾಜ್ಯ ಪರಿಷತ್ ಸದಸ್ಯ ಎಂ.ಡಿ. ಮುಕ್ರಮ್ ಮತ್ತಿತರರು ಇದ್ದರು.