ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‍ಗೆ ಬೀದರ್ ಲೋಗೊ

Ramesh Tippnoor Sanman Photo-2
Published on

ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ ಗ್ರಾಮದ ರಮೇಶ ತಿಪ್ಪನೂರ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ಲೋಗೊ ರಚಿಸಿ ಗಮನ ಸೆಳೆದಿದ್ದಾರೆ.
ಇಲ್ಲಿಯ ಬಸವ ಮುಕ್ತಿ ಮಂದಿರದಲ್ಲಿ ಶಿವಯ್ಯ ಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಅವರನ್ನು ಗೌರವಿಸಲಾಯಿತು.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಹಾಗೂ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಆಹ್ವಾನ ಪತ್ರಿಕೆ, ಪ್ರಚಾರ ಸಾಮಗ್ರಿಗಳಲ್ಲಿ ತಮ್ಮ ಲೋಗೊ ಬಳಸಿದೆ ಎಂದು ಸನ್ಮಾನ ಸ್ವೀಕರಿಸಿದ ರಮೇಶ ತಿಪ್ಪನೂರ ಹೇಳಿದರು.
ಟ್ರಸ್ಟ್ ಆಹ್ವಾನದ ಮೇರೆಗೆ ದೇಶದ ವಿವಿಧೆಡೆ ಸಾವಿರಕ್ಕೂ ಹೆಚ್ಚು ಲೋಗೊಗಳು ರಚನೆಯಾಗಿದ್ದವು. ಆದರೆ, ಟ್ರಸ್ಟ್ ತಮ್ಮ ಲೋಗೊ ಅಂತಿಮಗೊಳಿಸಿತು ಎಂದು ಸದ್ಯ ಕಲಬುರಗಿಯಲ್ಲಿ ಮುದ್ರಣಾಲಯ ನಡೆಸುತ್ತಿರುವ ಅವರು ತಿಳಿಸಿದರು.
ರಾಮನ ಸೇವೆ ಸಲ್ಲಿಸುವ ಅವಕಾಶ ದೊರೆತದ್ದು ತಮ್ಮ ಸೌಭಾಗ್ಯ ಎಂದು ನುಡಿದರು.
ರಾಮನ ಮೇಲಿನ ಭಕ್ತಿಯ ಕಾರಣಕ್ಕೆ ರಮೇಶ ಅವರ ಲೋಗೊ ಆಯ್ಕೆಯಾಗಿದೆ ಎಂದು ಸಾನಿಧ್ಯ ವಹಿಸಿದ್ದ ರಾಜಶೇಖರ ಶಿವಾಚಾರ್ಯ ಗೋರಟಾ ಹೇಳಿದರು.
ಶಿಲೆ, ಮೂರ್ತಿ ನಿರ್ಮಾಣ ಸೇರಿದಂತೆ ರಾಮ ಮಂದಿರಕ್ಕೆ ಕರ್ನಾಟಕ ಮಹತ್ವದ ಕೊಡುಗೆ ನೀಡಿದೆ ಎಂದು ತಿಳಿಸಿದರು.
ಬೀದರ್ ಜಿಲ್ಲೆಯ ಕಲಾವಿದರೊಬ್ಬರು ರಚಿಸಿದ ಲೋಗೊ ಅಯೋಧ್ಯೆ ಟ್ರಸ್ಟ್‍ಗೆ ಆಯ್ಕೆ ಆಗಿರುವುದು ಸಂತಸದ ಸಂಗತಿ. ಅತ್ಯಾಕರ್ಷಕ ಹಾಗೂ ಅರ್ಥಪೂರ್ಣ ಲೋಗೋ ರಚಿಸಿದ ರಮೇಶ ಅವರ ಕಾರ್ಯ ಶ್ಲಾಘನೀಯ ಎಂದು ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಸುಭಾಷ್ ಕಲ್ಲೂರ ಹೇಳಿದರು.
ಬೀದರ್ ಜಿಲ್ಲೆಯವರು ಅಯೋಧ್ಯೆ ಟ್ರಸ್ಟ್‍ನ ಲೋಗೊ ರಚಿಸಿರುವುದು ಜಿಲ್ಲೆಗೆ ಹೆಮ್ಮೆ, ಅಭಿಮಾನದ ಸಂಗತಿಯಾಗಿದೆ. ರಾಮನಿಗೂ ಬೀದರ್‍ಗೂ ನಂಟು ಇರುವ ಪ್ರತೀತಿ ಇದೆ. ಇದೀಗ ರಮೇಶ ಅವರು ಲೋಗೊ ರಚಿಸಿ ಅಯೋಧ್ಯೆಯೊಂದಿಗೆ ಬೀದರ್ ನಂಟು ಬೆಸೆದಿದ್ದಾರೆ. ಅವರಿಗೆ ಉಜ್ವಲ ಭವಿಷ್ಯ ಇದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ತಿಳಿಸಿದರು.
ವಿಶ್ವ ಹಿಂದೂ ಪರಿಷತ್ತಿನ ಉತ್ತರ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣ ಸಾಳೆ, ಪ್ರಮುಖರಾದ
ಮಲ್ಲಿಕಾರ್ಜುನ ಪಟ್ನೆ ಗಡಿಕುಶನೂರ, ಶ್ರೀಕಾಂತ ಮೋದಿ, ಜಮಶೆಟ್ಟಿ ಪಾಟೀಲ, ಡಾ. ರೂಪಾ, ಶೀಲಾ ರಮೇಶ, ರಾಜಶೇಖರ ನಾಗಮೂರ್ತಿ, ಬಸವರಾಜ ಸ್ವಾಮಿ ಹೆಡಗಾಪುರ, ಪುನೀತ್ ಸಾಳೆ, ಸೋಮನಾಥ ಸಂಗಮೇಶ ಸೊಶೆಟ್ಟಿ ಮೊದಲಾದವರು ಇದ್ದರು.
ಕಲಾವಿದ ಸಂಜೀವಕುಮಾರ ಸ್ವಾಮಿ ಸಂಗೀತ ನಡೆಸಿಕೊಟ್ಟರು. ಮಹಾಲಿಂಗ ಸ್ವಾಮಿ ಚಟ್ನಳ್ಳಿ ಸ್ವಾಗತಿಸಿದರು. ರೇಣುಕಾ ಮಳ್ಳಿ ನಿರೂಪಿಸಿದರು. ಕಾಶೀನಾಥ ಜಕ್ಕಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net