ರಾಜ್ಯ ಸರ್ಕಾರಕ್ಕೆ ಅಭಿನಂದನಾ ಪತ್ರ

Kalyan Karnataka Pratistan
Published on

ಬೀದರ್: ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡಿದ ರಾಜ್ಯ ಸರ್ಕಾರಕ್ಕೆ ಅಭಿನಂದನಾ ಪತ್ರ ಕಳುಹಿಸುವ ಮೂಲಕ ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಟ್ರಸ್ಟ್ ಸಂಭ್ರಮಾಚರಿಸಿದೆ.
ಟ್ರಸ್ಟ್ ಪದಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಬರೆದ ಅಭಿನಂದನಾ ಪತ್ರವನ್ನು ಶುಕ್ರವಾರ ನಗರದ ಪ್ರಧಾನ ಅಂಚೆ ಕಚೇರಿಯ ಅಂಚೆ ಪೆಟ್ಟಿಗೆಗೆ ಹಾಕಿದರು.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರಾಗಿ ಘೋಷಣೆ ಮಾಡಿದ್ದರಿಂದ ರಾಜ್ಯ ಸರ್ಕಾರದ ಘನತೆ, ಗೌರವ ನೂರು ಪಟ್ಟು ಹೆಚ್ಚಾಗಿದೆ. ಸರ್ಕಾರದ ಅನೇಕ ಜನಪರ ಯೋಜನೆಗಳಿಗೆ ಬಸವಣ್ಣನವರ ಚಿಂತನೆಗಳೇ ಪ್ರೇರಣೆ ಎಂದು ಮುಖ್ಯಮಂತ್ರಿ ಹೇಳಿರುವುದು ಸಾರ್ವಜನಿಕರಲ್ಲಿ ಹೆಮ್ಮೆಯ ಭಾವ ಮೂಡಿಸಿದೆ ಎಂದು ಟ್ರಸ್ಟ್ ಅಧ್ಯಕ್ಷ ಬಸವಕುಮಾರ ಪಾಟೀಲ ಹೇಳಿದರು.
ಬಸವಣ್ಣನವರು ಕನ್ನಡ ನೆಲದ ಅಂತರಂಗದ ಧ್ವನಿ. ಅಪಾರ ಜೀವ ಕಾಳಜಿಯುಳ್ಳ ಅಪರೂಪದ ಅನುಕರಣೀಯ ನಾಯಕ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಡಾ. ಸಿ.ಎಸ್. ದ್ವಾರಕನಾಥ ಅವರು 2015 ರ ನವೆಂಬರ್ 15 ರಂದು ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕøತಿಕ ನಾಯಕರೆಂದು ಘೋಷಣೆ ಮಾಡಬೇಕು ಎಂದು ಕೋರಿದ್ದರು. ಇದಕ್ಕೆ ಪೂರಕವಾಗಿ ದಿ. ಮಾತೆ ಮಹಾದೇವಿ ಶರಣ ಮೇಳದಲ್ಲಿ ಈ ಕುರಿತು ನಿರ್ಣಯ ಕೈಗೊಂಡು ಹೋರಾಟಕ್ಕೆ ಕರೆ ಕೊಟ್ಟಿದ್ದರು. ನಂತರ ಸತತ ಸರ್ಕಾರದ ಮೇಲೆ ಒತ್ತಡ ಹೇರಿದ್ದರು ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ತತ್ವ ನಿಷ್ಠ ಮಠಾಧೀಶರ ವೇದಿಕೆ, ಪ್ರಗತಿಪರ ಚಿಂತಕರು, ಎಲ್ಲ ಬಸವ ಪರ ಸಂಘಟನೆಗಳು, ಬಸವಾನುಯಾಯಿಗಳು ಒಕ್ಕೊರಲಿನಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂದು ಹೇಳಿದರು.
ಮನೆ ಮನೆಯಲ್ಲೂ ಸಂಭ್ರಮ ಆಚರಿಸಿ: ಸಾಂಸ್ಕøತಿಕ ನಾಯಕ ಘೋಷಣೆಯ ಸಂಭ್ರಮವನ್ನು ಮನೆ ಮನೆಯಲ್ಲೂ ಆಚರಿಸಬೇಕು. ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡು, ವಚನ ಚಿಂತನೆ ಮಾಡಬೇಕು. ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕು ಎಂದು ತಿಳಿಸಿದರು.
ಟ್ರಸ್ಟ್‍ನ ರಮೇಶ ಚಿಲ್ಲರ್ಗಿ, ಗುಂಡಪ್ಪ ಹುಡಗೆ, ಪ್ರಭು ಎಚ್, ಮನೋಜ ಬುಕ್ಕಾ, ಮಹೇಶ ಬಾಬುರಾವ್, ರಾಜಕುಮಾರ ಧುಮ್ಮನಸೂರೆ, ಗಣಪತಿ ಸೋಲಪುರೆ, ಧನರಾಜ ಸ್ವಾಮಿ, ಅರವಿಂದ ಧುಮ್ಮನಸೂರೆ, ಶರಣಪ್ಪ ಬಿರಾದಾರ, ಚಂದ್ರಕಾಂತ ಬಾಬುರಾವ್, ವೀರಶೆಟ್ಟಿ ಶಿವಶೆಟ್ಟಿ, ಬಸವರಾಜ ಪಾಟೀಲ, ಸೋಮನಾಥ ಮಾಳಗೆ, ಮಲ್ಲಿಕಾರ್ಜುನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net