ವೀರಭದ್ರೇಶ್ವರ ಜಾತ್ರೋತ್ಸವಕ್ಕೆ ಚಾಲನೆ

Pallakki
Published on

ಹುಮನಾಬಾದ್: ಪಟ್ಟಣದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮಕರ ಸಂಕ್ರಮಣ ದಿನವಾದ ಭಾನುವಾರ ರಾತ್ರಿ ಅಪಾರ ಭಕ್ತರ ಮಧ್ಯೆ ದೇವರ ಶಲ್ಯ ಸುಡುವುದರೊಂದಿಗೆ ಆರಂಭಗೊಂಡಿತು.
ಹಿರೇಮಠದ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯರನ್ನು ಮಠದಿಂದ ದೇವಸ್ಥಾನಕ್ಕೆ ವಾದ್ಯಮೇಳ ಸಮೇತ ಬರಮಾಡಿಕೊಳ್ಳಲಾಯಿತು. ನಂತರ ದೇವಸ್ಥಾನದಲ್ಲಿ ಭಕ್ತರ ಮಧ್ಯೆ ವಿದ್ಯುಕ್ತವಾಗಿ ವೀರಭದ್ರೇಶ್ವರರ ಪಲ್ಲಕಿ ಉತ್ಸವದ ಭವ್ಯ ಮೆರವಣಿಗೆಗೆ ಚಾಲನೆ ದೊರೆಯಿತು. ಜ.27ರವರೆಗೆ ದೇವರ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾರಂಪರಿಕವಾಗಿ ಸಂಗೀತ ವಾದ್ಯಗಳೊಂದಿಗೆ ಜರುಗಲಿದೆ.
ದೇವಸ್ಥಾನದಿಂದ ಪಲ್ಲಕ್ಕಿ ಪ್ರಾರಂಭವಾಗಿ ಜೇರಪೇಟ್ ಬಡಾವಣೆ ಹನುಮಾನ ಮಂದಿರ ಹತ್ತಿರ ಹಾಗೂ ಬಸ್ ನಿಲ್ದಾಣ ಬಳಿಯ ಅಗ್ನಿ ಕುಂಡದ ಬಳಿ ನೆರೆದಿದ್ದ ಸಾವಿರಾರು ಭಕ್ತರ ಮಧ್ಯೆ ಶಲ್ಯ ಸುಡಲಾಯಿತು.
ದೇವರಿಂದ ಸುಡುವ ಶಲ್ಯ ಯಾರಿಗೆ ಲಭಿಸುತ್ತದೋ ಅವರಿಗೆ ಉತ್ತಮವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದ್ದು, ಶಲ್ಯ ಸುಡುತ್ತಿದ್ದಂತೆ ಅದನ್ನು ಪಡೆಯಲು ಭಕ್ತರು ಮುಗಿಬಿದ್ದು ಪಡೆಯಲು ಪ್ರಯತ್ನಿಸಿರುವುದು ವಿಶೇಷವಾಗಿತ್ತು.
ದೇವರ ಪಲ್ಲಕಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಥೇರ್ ಮೈದಾನವರೆಗೆ ಹಾದು ಹೋಗಲಿದೆ. ಪಲ್ಲಕ್ಕಿ ಹೊರಡುವ ರಸ್ತೆಗಳಲ್ಲಿ ಮಹಿಳೆಯರು ನಿತ್ಯ ರಂಗೋಲಿ ಬಿಡಿಸಿ ಅಲಂಕರಿಸಿ ತಳಿರು ತೋರಣಗಳಿಂದ ದೇವರನ್ನು ಸ್ವಾಗತಿಸಿದರು.
ಪಲ್ಲಕ್ಕಿ ಉತ್ಸವದಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ್, ಮಾಜಿ ಶಾಸಕ ಸುಭಾಷ ಕಲ್ಲೂರ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ್ ಸೇರಿ ಜನಪ್ರತಿನಿಗಳು, ಗಣ್ಯರು, ಸ್ವಯಂ ಸೇವಕರು, ಭಕ್ತರು ಪಾಲ್ಗೊಂಡಿದ್ದರು.

27ರಂದು ಸಮಯಿ ರೋಶನಿ
ಶ್ರೀ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಜ.19ರಂದು ಆನೆ ಮೆರವಣಿಗೆ ಮತ್ತು ಕೀರ್ತನೆ ನಡೆಯಲಿದೆ. 20ರಿಂದ 24ರವರೆಗೆ ಉಚ್ಚಾಯಿ ಮೆರವಣಿಗೆ, ಗಾಯನ, 25ರಂದು ಅಗ್ನಿಪೂಜೆ, 26ರಂದು ರಥೋತ್ಸವ, ಮಧ್ಯಾಹ್ನ 2ಕ್ಕೆ ಜಂಗಿ ಕುಸ್ತಿ ಸ್ಪಧರ್ೆ ಇದೆ. 27ರಂದು ಸಮಯಿ ರೋಶನಿ ಮತ್ತು ದರ್ಬಾರ್ ಸಮಾರಂಭ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net