

ಭಾಲ್ಕಿ: ಶ್ರೇಷ್ಠವಾಗಿರುವ ಭಾರತೀಯ ಸಂಸ್ಕೃತಿ, ಕಲೆ, ಹಬ್ಬ, ಉತ್ಸವ ಮತ್ತು ಪರಂಪರೆ ಬಗ್ಗೆ ಮಕ್ಕಳಿಗೆ ತಿಳಿಹೇಳುವ ಅಗತ್ಯವಿದೆ ಎಂದು ಸಂಗೀತ ಕಲಾವಿದ ಸಿದ್ರಾಮಯ್ಯ ಸ್ವಾಮಿ ಹೇಳಿದರು.
ಪಟ್ಟಣದ ಗುರುಪ್ರಸಾದ ಹಿರಿಯ ಮತ್ತು ಪ್ರೌಢಶಾಲೆ ಆವರಣದಲ್ಲಿ ಸಂಕ್ರಾಂತಿ ನಿಮಿತ್ತ ಏರ್ಪಡಿಸಿದ್ದ ಹುಗ್ಗಿ-ಸುಗ್ಗಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸೂರ್ಯ ಪಥ ಬದಲಾಯಿಸುವ ಹಿನ್ನೆಲೆಯಲ್ಲಿ ಸಂಕ್ರಾಂತಿ ಆಚರಿಸಲಾಗುತ್ತದೆ. ಹಳ್ಳಿಯ ಸೊಗಡು ಬಿಂಬಿಸುವ ಕೃಷಿಕರ ಪಾಲಿಗೆ ಇದೊಂದು ವಿಶೇಷ ಹಬ್ಬ ಎಂದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಭಾರತದ ಹಬ್ಬಗಳಲ್ಲಿ ಸಂಕ್ರಾಂತಿ ಪ್ರಮುಖ. ಅಂದು ಸೂರ್ಯ ಮಕರ ರಾಶಿಗೆ ಪ್ರವೇಶಿಸುತ್ತಾನೆ ಎಂದು ಹೇಳಿದರು.
ಪ್ರಮುಖರಾದ ಶುಭಾಂಗಿ ಬಳತೆ, ಶ್ರೀದೇವಿ ಬಸವಕಲ್ಯಾಣ, ಡಾ.ಪೂಜಾ ಉದಗೀರೆ, ಧನರಾಜ ಬಂಬುಳಗೆ, ಚೇತನ ಶಿರೋಳ್ಳಿ, ಮುಖ್ಯಗುರುಗಳಾದ ಬಾಬು ಬೆಲ್ದಾಳ, ಸವಿತಾ ಭೂರೆ ಇತರರಿದ್ದರು. ಸಿದ್ರಾಮ ರಾಜಪುರೆ ನಿರೂಪಣೆ ಮಾಡಿದರು. ಅಶೋಕ ನೆಲವಾಡೆ ವಂದಿಸಿದರು.