ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯೇ ಧ್ಯೇಯ

14blk1
Published on

ಭಾಲ್ಕಿ: ಹಿರೇಮಠ ಸಂಸ್ಥಾನದ ಪೂಜ್ಯ ಲಿಂ.ಡಾ.ಚನ್ನಬಸವ ಪಟ್ಟದ್ದೇವರು ತೋರಿದ ಮಾರ್ಗದಲ್ಲಿ ಕೈಲಾದಷ್ಟು ಸಮಾಜ ಸೇವೆ ಮಾಡುತ್ತಿರುವೆ. ಎಂದಿಗೂ ಪ್ರಶಸ್ತಿ, ಪುರಸ್ಕಾರಕ್ಕಾಗಿ ಕೆಲಸ ಮಾಡಿಲ್ಲ. ವಚನ ಸಾಹಿತ್ಯ ಪ್ರಸಾರ-ಪ್ರಚಾರ, ಸಮಾಜ ಸುಧಾರಣೆ ಹಾಗೂ ಈ ಭಾಗದ ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಸೇವೆ ಸಲ್ಲಿಸುತ್ತಿರುವುದಾಗಿ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಆಯೋಜಿಸಿದ್ದ ಗುರುವಂದನೆ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿದ ಅವರು, ನನ್ನ ಅಳಿಲು ಸೇವೆ ಗುರುತಿಸಿ ಸರ್ಕಾರ, ಸಂಘ-ಸಂಸ್ಥೆಗಳು ಅನೇಕ ಪ್ರಶಸ್ತಿ, ಪುರಸ್ಕಾರ ನೀಡಿವೆ. ಇದೀಗ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ನೀಡಿ ಗೌರವಿಸಿದೆ. ವೈಯಕ್ತಿಕವಾಗಿ ನನಗೆ ಯಾವ ಗೌರವ, ಪ್ರಶಸ್ತಿ ಬಂದರೂ ಭಕ್ತರಿಗೆ ಸಮರ್ಪಣೆ ಆಗುತ್ತದೆ ಎಂದರು.
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣ ಪೂರಕವಾಗಿದೆ. ಹೀಗಾಗಿ ಶಿಕ್ಷಕರಾದವರು ಗಡಿಯಾರ ನೋಡಿ ಪಾಠ ಮಾಡದೆ ಮಕ್ಕಳ ಬೆಳವಣಿಗೆ ದೃಷ್ಟಿಯಿಂದ ಬೋಧನೆ ಮಾಡಬೇಕು. ಕೇವಲ ಅಂಕ ಗಳಿಕೆಗೆ ಒತ್ತು ನೀಡದೆ ಅವರಲ್ಲಿ ಶಿಸ್ತು ಕಲಿಸುವ ಜತೆಗೆ ಶಿಕ್ಷಣ, ಸಂಸ್ಕಾರ ನೀಡಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವೈದ್ಯರು, ಇಂಜಿನಿಯರ್, ಸಂಶೋಧಕರು, ಉನ್ನತ ಅಧಿಕಾರಿಗಳಾಗಿ ದೇಶದ ವಿವಿಧೆಡೆ ಸೇವೆ ಸಲ್ಲಿಸುತ್ತಿರುವುದು ಖುಷಿ ತಂದಿದೆ. ಮುಂದೆಯೂ ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಇಟಿ, ನೀಟ್ ಮೊದಲಾದ ಕೋಸ್೯ ಗಳಲ್ಲಿ ರಾಜ್ಯ ಮತ್ತು ರಾಷ್ಟ್ರಕ್ಕೆ ಫಸ್ಟ್ ರ್ಯಾಂಕ್ ತರುವ ನಿಟ್ಟಿನಲ್ಲಿ ಶಿಕ್ಷಕರು ಪ್ರಯತ್ನಿಸಬೇಕು ಎಂದರು.
ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ, ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕ ಮಾತನಾಡಿದರು. ಆಡಳಿತಾಧಿಕಾರಿ ಮೋಹನರಡ್ಡಿ ಸ್ವಾಗತಿಸಿದರು. ಮಧುಕರ ಗಾಂವಕರ್ ನಿರೂಪಣೆ ಮಾಡಿದರು. ಲಕ್ಷ್ಮಣ ಮೇತ್ರೆ ವಂದಿಸಿದರು.

ರು.25 ಲಕ್ಷ ವಾಪಸ್ ನೀಡಿದ ಪೂಜ್ಯರು
ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಗುರುವಂದನೆ ಕಾರ್ಯಕ್ರಮದಲ್ಲಿ ಅಭಿನಂದಿಸುವ ಜತೆಗೆ ಪೂಜ್ಯರಿಗೆ 25 ಲಕ್ಷ ರೂ. ಚೆಕ್ ನೀಡಿದರು. ಸನ್ಮಾನ ಸ್ವೀಕರಿಸಿ ಮಾತನಾಡುವ ವೇಳೆ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಭಾವುಕರಾಗಿ ನನಗೆ ಹಣ ಮುಖ್ಯವಲ್ಲ. ಬಸವ ತತ್ವ ಪ್ರಸಾರ-ಪ್ರಚಾರ ಜತೆಗೆ ಈ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಮುಖ್ಯವಾಗಿದೆ. ನಮ್ಮ ಸಂಸ್ಥೆಯಲ್ಲಿ ಕಲಿಯುವ ಮಕ್ಕಳಿಗೆ ಉತ್ತಮ ಸಂಸ್ಕಾರ, ನೈತಿಕತೆ, ಮಾನವೀಯತೆ ಕಲಿಸಿಕೊಟ್ಟರೆ ಅದೇ ನನಗೆ ಕೊಡುವ ಬಹುದೊಡ್ಡ ಉಡುಗೊರೆ, ಕಾಣಿಕೆ ಆಗಲಿದೆ ಎಂದು ಹೇಳಿ ಕಾಣಿಕೆ ರೂಪದಲ್ಲಿ ನೀಡಿದ 25 ಲಕ್ಷ ರೂ. ಚೆಕ್ ಅನ್ನು ನಯವಾಗಿ ನಿರಾಕರಿಸಿ ಶಿಕ್ಷಣ ಸಂಸ್ಥೆ ಮುಖ್ಯಸ್ಥರಿಗೆ ಹಿಂತಿರುಗಿಸಿ ಮಕ್ಕಳ ಮೇಲಿನ ಕಾಳಜಿ ಎಂತಹದ್ದು ಎಂಬುದನ್ನು ತೋರಿಸಿಕೊಟ್ಟರು.

ಕಲಿಕೆಗೆ ಬಂದು ಪೀಠಾಧಿಪತಿಯಾದೆ
ಭಾಲ್ಕಿ ಹಿರೇಮಠ ಸಂಸ್ಥಾನಕ್ಕೆ ಸ್ವಾಮೀಜಿ ಆಗಬೇಕೆಂದು ಬಂದವನಲ್ಲ. ಶಿಕ್ಷಣ ಕಲಿಯಲು ಮಠಕ್ಕೆ ಬಂದೆ. ನನ್ನಲ್ಲಿನ ಅಧ್ಯಾತ್ಮ ಹಸಿವು ಗುರುತಿಸಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಹಿರೇಮಠದ ಪೀಠಾಪತಿ ಮಾಡಿದರು ಎಂದು ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸ್ಮರಿಸಿದರು. ಶ್ರೀಮಠಕ್ಕೆ ಆಸ್ತಿಪಾಸ್ತಿ ಏನೂ ಇರಲಿಲ್ಲ. ಸಂಕಷ್ಟದಲ್ಲೇ ಮಠವನ್ನು ಮುನ್ನಡೆಸಿಕೊಂಡು 1992ರಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನಡಿ ಮಠದಲ್ಲೇ ಸಣ್ಣದೊಂದು ಶಾಲೆ ತೆರೆದೆ. 40 ಮಕ್ಕಳು, ಇಬ್ಬರು ಶಿಕ್ಷಕರಿಂದ ಆರಂಭಗೊಂಡ ಸಂಸ್ಥೆ ಇಂದು ಹಿರಿಯ ಪೂಜ್ಯರ ಆಶೀರ್ವಾದ, ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ, ಭಕ್ತರ ಸಹಕಾರದಿಂದ ಹೆಮ್ಮರವಾಗಿ ಬೆಳೆದಿದೆ. 20 ಸಾವಿರ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದು, 2000ಕ್ಕೂ ಅಧಿಕ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net