ಹಬ್ಬಗಳು ನೆಲದ ಸಂಸ್ಕೃತಿ ಪ್ರತೀಕ

Shivratna award
Published on

ಬೀದರ್: ಪ್ರತಿದಿನ ಲಿಂಗಾರ್ಚನೆ ಹಾಗೂ ಧ್ಯಾನ ಮಾಡಬೇಕು. ಇದರಿಂದ ಒತ್ತಡ ನಿವಾರಣೆ ಜತೆಗೆ ಮನಸ್ಸು ಗಟ್ಟಿಯಾಗುತ್ತದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಕರ್ನಾಟಕ ಜಾನಪದ ಪರಿಷತ್ ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಸಹಯೋಗದಡಿ ಹಳೇ ನಾವದಗೇರಿಯಲ್ಲಿ ಆಯೋಜಿಸಿದ್ದ ಶಿವರತ್ನ ಪ್ರಶಸ್ತಿ ಪ್ರದಾನ ಮತ್ತು ಜಾನಪದ ಸಂಭ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನಾವು ಗಳಿಸಿದ ಒಂದಿಷ್ಟು ಭಾಗವನ್ನು ದಾಸೋಹ ಮಾಡಬೇಕು. ಮಹಾತ್ಮರು, ಶರಣರ ತತ್ವ ಹಾಗೂ ಒಳ್ಳೆಯ ಮಾತುಗಳನ್ನು ಆಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪದೇಶಿಸಿದರು.
ಲಿಂ.ರತ್ನಮ್ಮ ಶಿವರಾಯ ಹೆಬ್ಬಾಳೆ ಅವರು ಜಾನಪದ ಹಾಡುಗಳನ್ನು ರಚಿಸುವ ಜತೆಗೆ ಗಾಯನಕ್ಕೆ ಹೆಸರಾಗಿದ್ದರು. ಹಲವು ಬಾರಿ ಅವರ ಹಾಡುಗಳನ್ನು ಕೇಳಿದ್ದೇವೆ. ಜಾನಪದ ಕುರಿತು ಅವರಲ್ಲಿದ್ದ ಅಪಾರ ಕಾಳಜಿ ಮಾದರಿ. ಜಾನಪದ ಎಲ್ಲ ಕಲೆಗಳಿಗೆ ತಾಯಿ ಸ್ಥಾನದಲ್ಲಿದೆ. ಜಾನಪದ ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ ಎಂದರು.
ಬೀದರ್ ವಿವಿ ಕಲಾ ನಿಕಾಯದ ಡೀನ್, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿ, ಜಾನಪದ ಕಲಾವಿದೆಯಾಗಿದ್ದ ರತ್ನಮ್ಮ ಶಿವರಾಯ ಹೆಬ್ಬಾಳೆ ಸ್ಮರಣೆ ನಿಮಿತ್ತ ಆರು ವರ್ಷಗಳಿಂದ ಜಿಲ್ಲೆಯ ಸಾಧಕರಿಗೆ ಶಿವರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಎಲೆಮರೆ ಕಾಯಿಯಂತಿರುವ ಕಲಾವಿದರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಕೆಲಸ ಜಾನಪದ ಪರಿಷತ್ ಮೂಲಕ ಮಾಡಲಾಗುತ್ತಿದೆ ಎಂದು ಹೇಳಿದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಕಾಂಗ್ರೆಸ್ ಯುವ ಮುಖಂಡ ಸಾಗರ ಈಶ್ವರ ಖಂಡ್ರೆ, ಬೀದರ್ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಎಸ್. ಬಿರಾದಾರ ಮಾತನಾಡಿದರು. ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಗಾಂಧಿಗಂಜ್ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಗಾದಗಿ, ಕಾರ್ಯಕ್ರಮ ಆಯೋಜಕ ಚಂದ್ರಶೇಖರ ಹೆಬ್ಬಾಳೆ, ರಾಷ್ಟ್ರೀಯ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ, ಪ್ರೊ.ಎಸ್.ಬಿ. ಬಿರಾದಾರ ಇತರರಿದ್ದರು.
ಉದ್ಯಮಿ ಅಶೋಕ ಹೆಬ್ಬಾಳೆ ಸ್ವಾಗತಿಸಿದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು. ಸೇವಾ ನಿವೃತ್ತರಾದ ಗುರುನಾಥ ಅಕ್ಕಣ್ಣ, ಶಿವಪುತ್ರ ಸಂಗನಬಸವ, ಪ್ರೇಮಾ ಶಿವಪೂಜೆ ಅವರನ್ನು ಸನ್ಮಾನಿಸಲಾಯಿತು. ಎಳ್ಳಮಾವಾಸ್ಯೆ ನಿಮಿತ್ತ ಭಜ್ಜಿ, ರೊಟ್ಟಿ ಸೇರಿ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ನಂತರ ನಡೆದ ಜಾನಪದ ಸಂಭ್ರಮದಲ್ಲಿ ರಾಯಚೂರಿನ ಶರಣಪ್ಪ ಗೋನಾಳ, ಪ್ರತಿಭಾ ಮತ್ತು ಸಂಗಡಿಗರಿಂದ ಜಾನಪದ, ತತ್ವ ಗೀತೆಗಳ ಗಾಯನ ನಡೆಯಿತು. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಕೊಪ್ಪಳದ ಡಾ.ಜೀವನಸಾಬ್ ಬಿನ್ನಾಳ ಮತ್ತು ತಂಡ ತತ್ವ ಪದ, ಜಾನಪದ ಗೀತೆ ಪ್ರಸ್ತುತಪಡಿಸಿತು.

ಹೊನ್ನಾಡೆ ಸೇರಿ ಹಲವರಿಗೆ ಗೌರವ
ವಿಜಯವಾಣಿ ಹುಲಸೂರು ವರದಿಗಾರರ ರಾಜಕುಮಾರ ಹೊನ್ನಾಡೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಒಂಬತ್ತು ಸಾಧಕರಿಗೆ 2022-23ನೇ ಸಾಲಿನ ಶಿವರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೊ.ಎಸ್.ಜಿ. ಕರಣೆ ಬಸವಕಲ್ಯಾಣ (ಶೈಕ್ಷಣಿಕ), ನೆಹರು ಬಿರಾದಾರ ಧೂಪತಮಹಾಗಾಂವ (ಸಮಾಜ ಸೇವೆ), ಬಾಬುರಾವ ಗುಡ್ಡಾ ಕಮಲನಗರ (ಶೈಕ್ಷಣಿಕ), ಸುಭಾಷ ಗಂಗಾ ಹುಮನಾಬಾದ್ (ವಿಜ್ಞಾನ), ಶಿವಶರಣಪ್ಪ ವಲ್ಲೆಪುರೆ ಔರಾದ್ (ಧಾರ್ಮಿಕ), ಯಶವಂತ ಕುಚಬಾಳ ಬೀದರ್ (ಕಲಾ), ನಾಗಶೆಟ್ಟಿ ಚೋಳಾ ಭಾಲ್ಕಿ (ಧಾರ್ಮಿಕ), ರಾಜಕುಮಾರ ಹೊನ್ನಾಡೆ ಹುಲಸೂರು (ಮಾಧ್ಯಮ), ನೀಲಕಂಠರಾವ ಇಸ್ಲಾಂಪುರ ಚಿಟಗುಪ್ಪ (ನಾಡು-ನುಡಿ ಸೇವೆ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ತಲಾ 5 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net