ವೈಜ್ಞಾನಿಕ ತಳಹದಿ ಮೇಲೆ ಜೀವನ ನಡೆಸಿ

BVB College
Published on

ಬೀದರ್: ಯುವಕರು ವೈಜ್ಞಾನಿಕ ತಳಹದಿ ಮೇಲೆ ಜೀವನ ನಡೆಸಬೇಕು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ್ ವಾಲಿ ಸಲಹೆ ಮಾಡಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‍ನ ಬೀದರ್ ಜಿಲ್ಲಾ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತ ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನಲ್ಲಿ ಆಯೋಜಿಸಿದ್ದ ಯುವ ವೈಜ್ಞಾನಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ವಿಜ್ಞಾನ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಬೇಕು ಎಂದು ಹೇಳಿದರು.
ಪರಿಷತ್ ರಾಜ್ಯ ಸಂಚಾಲಕ ದಾನಿ ಬಾಬುರಾವ್ ಮಾತನಾಡಿ, ಯುವಕರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪರಿಷತ್ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ದೇವಿಪ್ರಸಾದ್ ಕಲಾಲ್ ಮಾತನಾಡಿ, ಪರಿಷತ್ ಸಮಾಜ ಹಾಗೂ ವಿದ್ಯಾರ್ಥಿಗಳ ಪರ ಕೆಲಸ ಮಾಡುತ್ತಿದೆ. ಹಂತ ಹಂತವಾಗಿ ಸಮಾಜದಲ್ಲಿನ ಮೌಢ್ಯ ಹೋಗಲಾಡಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಶಿಕ್ಷಕ ತುಕಾರಾಮ ಭೋಲಾ ಪವಾಡ ಬಯಲು ನಡೆಸಿಕೊಟ್ಟರು. ಪರಿಷತ್‍ನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ರಫಿ ತಾಳಿಕೋಟೆ,
ಕಾರ್ಯದರ್ಶಿಯಾಗಿ ಸಂತೋಷಕುಮಾರ ಮಂಗಳೂರೆ, ನರಸಾರೆಡ್ಡಿ, ಸಂಘಟನಾ ಕಾರ್ಯದರ್ಶಿಯಾಗಿ ಚಾಮುಂಡೇಶ್ವರಿ, ಕೋಶಾಧ್ಯಕ್ಷರಾಗಿ ಪರಮೇಶ್ವರ ಬಿರಾದಾರ, ಸದಸ್ಯರಾಗಿ ಸಂತೋಷಕುಮಾರ ಚಲುವಾ, ಸಂತೋಷ ಸೋಲಪುರೆ, ಕನ್ಯಾಕುಮಾರಿ, ಹೀರಾಮಣಿ ಚವಾಣ್ ಅವರನ್ನು ಆಯ್ಕೆ ಮಾಡಲಾಯಿತು.
ಪ್ರಾಚಾರ್ಯ ಡಾ. ಪಿ. ವಿಠ್ಠಲರೆಡ್ಡಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಅಧ್ಯಕ್ಷ ಸುರೇಂದ್ರನಾಥ ಹುಡಗಿಕರ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಿಕಾರ್ಜುನ ಕನಕಟ್ಟೆ, ಸಂಶೋಧನಾ ಪರಿಷತ್ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಸಂಜುಕುಮಾರ ಸ್ವಾಮಿ, ಸುವರ್ಣಾ ವಾಘಮಾರೆ ಇದ್ದರು. ಶೈಲಜಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net