

ಹುಮನಾಬಾದ್: ಪಟ್ಟಣದ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಪುರಸಭೆ ಮಾಜಿ ಅಧ್ಯಕ್ಷ ವೀರಣ್ಣ ಎಚ್.ಪಾಟೀಲ್ ಅವಿರೋಧ ಆಯ್ಕೆಯಾಗಿದ್ದಾರೆ.
ಮಂದಿರದ ಆಡಳಿತಾಧಿಕಾರಿಯೂ ಆದ ಸಹಾಯಕ ಆಯುಕ್ತ ಪ್ರಕಾಶ ಕುದರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ನಾಮನಿರ್ದೇಶಿತ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಎಲ್ಲ ಸದಸ್ಯರು ಪಾಲ್ಗೊಂಡು ಕೈ ಎತ್ತುವ ಮೂಲಕ ಸರ್ವಸಮ್ಮತದಿಂದ ಅಧ್ಯಕ್ಷರ ಅವಿರೋಧ ಆಯ್ಕೆ ಮಾಡಿದರು.
ಸದಸ್ಯರಾದ ಪ್ರಧಾನ ಅರ್ಚಕ ಗುರು ಪೂಜಾರಿ, ಮಲ್ಲಿಕಾರ್ಜುನ ಮಾಶೆಟ್ಟಿ, ಅಭಿಷೇಕ ಪಾಟೀಲ್, ದತ್ತಕುಮಾರ ಚಿದ್ರಿ, ಸೋಮಶೇಖರ ಬುಳ್ಳಾ, ಕಲಾವತಿ ರಜಪೂತ್, ಮಹಾದೇವಿ ಗುಳಶೆಟ್ಟಿ, ಮಹೇಶ ಅಗಡಿ, ತಹಸೀಲ್ದಾರ್ ಅಂಜುಂ ತಬಸ್ಸುಮ್, ಡಿವೈಎಸ್ಪಿ ಜೆ.ಎಸ್. ನ್ಯಾಮೇಗೌಡ, ಸಿಪಿಐ ಗುರು ಪಾಟೀಲ್ ಇದ್ದರು. ನಂತರ ಅಧ್ಯಕ್ಷರು ಮತ್ತು ಸದಸ್ಯರನ್ನು ಪ್ರಮುಖರು ಸನ್ಮಾನಿಸಿ ಅಭಿನಂದಿಸಿದರು.
ಟ್ರಸ್ಟ್ ಮಾಡಿಲ್ಲ: ಅವಿರೋಧ ಆಯ್ಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ಕೆಲವರು ಟ್ರಸ್ಟ್ ಮಾಡಲಾಗಿದೆ ಎಂದು ಹೇಳುತ್ತಿರುವುದು ಸಂಪೂರ್ಣ ಸುಳ್ಳು. ದೇವಸ್ಥಾನಕ್ಕೆ ಸಂಬಂಸಿದಂತೆ ಯಾವುದೇ ಟ್ರಸ್ಟ್ ಮಾಡಿಲ್ಲ. ಅವ್ಯವಹಾರವೂ ನಡೆದಿಲ್ಲ. ಜಾತ್ರೆ ನಂತರ ದಾಖಲೆಸಮೇತ ಸಂಪೂರ್ಣ ಮಾಹಿತಿ ನೀಡುವೆ ಎಂದು ತಿಳಿಸಿದರು.
ದೇವಸ್ಥಾನ ಖಾತೆಯಲ್ಲಿ 5.5 ಕೋಟಿ ರೂ. ಜಮೆ ಇದ್ದು, ಮಂದಿರ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗುವುದು. ಸರ್ಕಾರದ ಅನುಮೋದನೆ ಸಂಬಂಧ ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರು ಮುಜರಾಯಿ ಸಚಿವರ ಜತೆ ಚರ್ಚಿಸಿದ್ದಾರೆ. ದೇವಸ್ಥಾನ ಅಭಿವೃದ್ಧಿಗಾಗಿ ಸಮಿತಿ ಎಲ್ಲ ಸದಸ್ಯರೊಂದಿಗೆ ಸಚಿವರು, ಸಂಸದರು, ಶಾಸಕರ ಹತ್ತಿರ ತೆರಳಿ ಮನವಿ ಮಾಡುವುದಾಗಿ ಹೇಳಿದರು.
ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್ ಅವರ ಅನುದಾನದಲ್ಲಿ 14 ಲಕ್ಷ ರೂ. ಒದಗಿಸಿದ್ದು, ದೇವಸ್ಥಾನ ಮುಂಭಾಗದ ರಸ್ತೆಯಲ್ಲಿ ಡಿವೈಡರ್, ವಿದ್ಯುತ್ ದೀಪ ಅಳವಡಿಕೆ ಕೆಲಸ ನಡೆಯುತ್ತಿದೆ. ಎಂಎಲ್ಸಿ ಭೀಮರಾವ ಪಾಟೀಲ್ ಹೊಸ ಕೋಣೆ ನಿರ್ಮಾಣಕ್ಕೆ 10 ಲಕ್ಷ ಅನುದಾನ ಒದಗಿಸಿದ್ದು, ಕಾಮಗಾರಿ ಆರಂಭಗೊಳ್ಳಲಿದೆ. ಅದರಂತೆ ದಾಸೋಹ ಭವನ ನಿರ್ಮಾಣಕ್ಕೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ 20 ಲಕ್ಷ ರೂ. ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಗೋಪುರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಕೋರಲಾಗುವುದು ಎಂದರು.
ಭಕ್ತನಾಗಿಯೇ ಸೇವೆ ಸಲ್ಲಿಸುವೆ
ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಿಂದಿನಿಂದಲೂ ಸೇವೆ ಸಲ್ಲಿಸುತ್ತಿರುವ ನಾನು ಅಧ್ಯಕ್ಷನಾದರೂ ಭಕ್ತನಾಗಿಯೇ ಸೇವೆ ಮುಂದುವರಿಸುವೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷ ವೀರಣ್ಣ ಪಾಟೀಲ್ ಹೇಳಿದರು. ದೇವಸ್ಥಾನಕ್ಕೆ ಮೂರೂವರೆ ವರ್ಷದಿಂದ ವ್ಯವಸ್ಥಾಪನಾ ಸಮಿತಿ ಇರಲಿಲ್ಲ. ಈಗ ರಚಿಸಲಾಗಿದೆ. ದೇವಸ್ಥಾನ ವಿಷಯದಲ್ಲಿ ರಾಜಕೀಯ ಮಾಡದೆ ಎಲ್ಲರೂ ಭಕ್ತರಾಗಿ ಸೇವೆ ಸಲ್ಲಿಸಿ ಅಭಿವೃದ್ಧಿಪಡಿಸೋಣ ಎಂದರು. ಜ.14ರಿಂದ 26ರವರೆಗೆ ಅದ್ದೂರಿಯಾಗಿ ಜಾತ್ರೋತ್ಸವ ನಡೆಯಲಿದೆ. ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿದಂತೆ ಹಿಂದಿನ ವಿವಿಧ ಸಮಿತಿಗಳು ಮುಂದುವರಿಯಲಿದ್ದು, ಎಲ್ಲವುಗಳ ಸಭೆ ನಡೆಸಲಾಗುವುದು. ವಿವಿಧ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಜಾತ್ರೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಲಾಗುವುದು ಎಂದು ಹೇಳಿದರು.
ಗದ್ದಲ ಎಬ್ಬಿಸುವ ಹುನ್ನಾರ
ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಕೆಲ ಕಿಡಿಗೇಡಿಗಳು ಗದ್ದಲ ಎಬ್ಬಿಸುವ ಹುನ್ನಾರ ನಡೆಸಿದ್ದರು. ಆದರೆ ಪೊಲೀಸ್ ಅಧಿಕಾರಿಗಳ ಜಾಗ್ರತೆಯಿಂದ ನಡೆದಿಲ್ಲ ಎಂದು ವೀರಣ್ಣ ಪಾಟೀಲ್ ಹೇಳಿದರು. ನಾಲ್ಕೈದು ಜನರು ಸೇರಿ ಈ ಬಗ್ಗೆ ಚರ್ಚಿಸಿರುವ ಆಡಿಯೋ ಲಭ್ಯವಿದೆ. ಇದರಲ್ಲಿನ ಇಬ್ಬರು ಈಗಾಗಲೇ ನಮ್ಮಿಂದ ತಪ್ಪಾಗಿದೆ ಎಂದು ಒಪ್ಪಿ ಕ್ಷಮೆ ಕೋರಿದ್ದಾರೆ. ವಿಷಯದಲ್ಲಿ ಇಂಥ ನೀಚ ಕೆಲಸ ಮಾಡಬಾರದು. ಎಲ್ಲರೂ ಸೇರಿ ಒಳ್ಳೆಯ ಕೆಲಸ ಮಾಡೋಣ ಎಂದು ಕರೆ ನೀಡಿದರು.