

ಬೀದರ್: ಭಾರತವನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿಸಲು ಯುವಕರು ಕೊಡುಗೆ ನೀಡಬೇಕು ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತರೂ ಆದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.
ಸ್ವಾಮಿ ವಿವೇಕಾನಂದರ 161ನೇ ಜಯಂತಿ ಅಂಗವಾಗಿ ಇಲ್ಲಿಯ ಗುರುನಾನಕ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಭಾರತವನ್ನು ವಿಶ್ವಗುರು ಆಗುವ ಕನಸು ಕಂಡಿದ್ದರು. ಅದನ್ನು ನನಸಾಗಿಸಲು ಮುಂದಾಗಬೇಕು ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯುವ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಬೇಕು.
ಜೀವನದಲ್ಲಿ ಉನ್ನತವಾದುದ್ದನ್ನು ಸಾಧಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಯುವಜನರು ರಾಜ್ಯ, ರಾಷ್ಟ್ರೀಯ ಯುವ ಪ್ರಶಸ್ತಿಗೆ ಭಾಜನರಾಗುವಂಥ ಕಾರ್ಯಗಳನ್ನು ಮಾಡಬೇಕು. ಈ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗುರುನಾನಕ ಶಿಕ್ಷಣ ಸಂಸ್ಥೆಗಳ ಸಮೂಹದ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕಾಗಿ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಆದ್ಯತೆ ಕೊಡಬೇಕು ಎಂದರು.
ಗುರುನಾನಕ ಶಿಕ್ಷಣ ಸಂಸ್ಥೆಯು ಒಂದು ವರ್ಷದ ಅವಧಿಯಲ್ಲಿ 10 ಸ್ಟಾರ್ಟ್ ಅಪ್ ಯೋಜನೆಗಳನ್ನು ಆರಂಭಿಸುವ ಯೋಜನೆ ಹೊಂದಿದ್ದು, ಇದರಲ್ಲಿ ಜಿಲ್ಲೆಯ ಯುವಕರಿಗೂ ಆದ್ಯತೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಂಚಾರ ಠಾಣೆ ಪೊಲೀಸ್ ಇನ್‍ಸ್ಪೆಕ್ಟರ್ ಕಪಿಲ್‍ದೇವ್ ಮಾತನಾಡಿ, ಯುವಕರಿಗೆ ಸಾಧನೆಗೆ ಬಹಳಷ್ಟು ಅವಕಾಶಗಳು ಇವೆ. ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತ ಓಂಪ್ರಕಾಶ ರೊಟ್ಟೆ, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಕಾಲೇಜಿನ ಪ್ರಾಚಾರ್ಯೆ ಡಾ. ಶಾಮಲಾ ವಿ. ದತ್ತಾ, ಎನ್‍ಎಸ್‍ಎಸ್ ಯೋಜನಾ ಅಧಿಕಾರಿ ಗೌರಮ್ಮ ಎಂ, ವಿಲಾಸರಾವ್ ಕುಲಕರ್ಣಿ, ಸಂಜಯ್ ಮನ್ನಳ್ಳಿ ಮತ್ತಿತರರು ಇದ್ದರು. ಅಶ್ವಿನಿ ಸ್ವಾಗತಿಸಿದರು. ಸಾಲೋನಿ ನಿರೂಪಿಸಿದರು. ಪಾಯಲ್ ವಂದಿಸಿದರು.
ನೆಹರೂ ಯುವ ಕೇಂದ್ರ ಹಾಗೂ ಗುರುನಾನಕ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಎನ್.ಎಸ್.ಎಸ್. ಘಟಕದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.