ವಿವೇಕಾನಂದರ ಆದರ್ಶ ಅಳವಡಿಸಿಕೊಳ್ಳಿ

12aurad2
Published on

ಔರಾದ್: ದೇಶದ ಸಂಸ್ಕೃತಿಗೆ ಸ್ವಾಮಿ ವಿವೇಕಾನಂದರು ನೀಡಿದ ಕೊಡುಗೆ ಅಮೋಘ. ಅವರ ಆದರ್ಶ, ತತ್ವಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಂಡು ಮುಂದಡಿ ಇಡುವಂತೆ ನಾಲಂದಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಮನ್ಮಥ ಡೋಳೆ ಹೇಳಿದರು.
ಪಟ್ಟಣದ ಅಮರೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 161ನೇ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ವಿವೇಕಾನಂದರ ಆದರ್ಶ ಯುವಶಕ್ತಿಗೆ ಅವಶ್ಯಕವಾಗಿದೆ. ವಿವೇಕಾನಂದರು ದೇಶಾಭಿಮಾನ, ಶಿಕ್ಷಣದ ಮಹತ್ವ ಮತ್ತು ಸಮಾನತೆ ಬಗ್ಗೆ ನೀಡಿರುವ ಸಂದೇಶಗಳನ್ನು ಅನುಸರಿಸಬೇಕಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಜಗತ್ತು ಮೆಚ್ಚುವಂಥ ಆಡಳಿತ ನೀಡುತ್ತಿದ್ದಾರೆ. ವಿವೇಕ ವಾಣಿಯನ್ನು ಮೋದಿ ಅಳವಡಿಸಿಕೊಂಡಿದ್ದೇ ಇದಕ್ಕೆ ಕಾರಣ. ಹೀಗಾಗಿ ವಿವೇಕಾನಂದರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಓದಬೇಕು ಎಂದು ಸಲಹೆ ನೀಡಿದರು.
ಎಬಿವಿಪಿ ನಗರ ಘಟಕ ಅಧ್ಯಕ್ಷ ಡಿ.ಡಿ. ಬೊಳಗಾವೆ ಮಾತನಾಡಿ, ತಂದೆ-ತಾಯಿ ಹಾಗೂ ಗುರು ರಾಮಕೃಷ್ಣ ಪರಮಹಂಸರ ಆದರ್ಶದಿಂದ ವಿವೇಕಾನಂದರು ಚಿಕ್ಕ ವಯಸ್ಸಿನಲ್ಲೇ ಜಗತ್ತಿನ ದೊಡ್ಡ ಸಂತನಾಗಿ ಹೊರಹೊಮ್ಮಿದರು ಎಂದು ಬಣ್ಣಿಸಿದರು.
ಆರ್.ಪಿ. ಮಠ ಅಧ್ಯಕ್ಷತೆ ವಹಿಸಿದ್ದರು. ಲೋಕೇಶ, ಪ್ರಕಾಶ ಪಾಟೀಲ್, ಧನರಾಜ ಬಲ್ಲೂರ, ಸುನೀತಾ, ಅಂಬಾದಾಸ ನಳಗೆ, ಅನೀಲ ಮೇತ್ರೆ, ಮಲ್ಲಿಕಾರ್ಜುನ ಟೆಕರಾಜ್ ಇತರರಿದ್ದರು. ಶಶಿಕಾಂತ ರ್ಯಾಕಲೆ ಸ್ವಾಗತಿಸಿದರು. ಇಂದ್ರಾಯಣಿ ಸಗರ ನಿರೂಪಣೆ ಮಾಡಿದರು. ಅಶೋಕ ಶೆಂಬೆಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net