ಒಳ್ಳೆಯವರಿಗೆ ಶ್ರೀಕೃಷ್ಣ ರಕ್ಷಾ ಕವಚ

iskcon
Published on

ಬೀದರ್: ಶ್ರೀಕೃಷ್ಣ ಒಳ್ಳೆಯವರಿಗೆ ರಕ್ಷಾ ಕವಚವಾಗಿ ಕಾಪಾಡುತ್ತಾನೆ ಎಂದು ಮಹಾರಾಷ್ಟ್ರದ ಗಿರಿವರಧಾರಿ ಪ್ರಭು ಹೇಳಿದರು.
ನಗರದ ಇಸ್ಕಾನ್ ನೀಲಾಚಲ ಧಾಮದಲ್ಲಿ ಹಮ್ಮಿಕೊಂಡಿದ್ದ ಜಗನ್ನಾಥ ಮಂದಿರದ ಸ್ಥಾಪನಾ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಭಗವದ್ಗೀತೆ ಅಮರ ಗೀತೆಯಾಗಿದೆ. ಭಗವದ್ಗೀತೆ ನಿತ್ಯ ಅಧ್ಯಯನದಿಂದ ಒಳ್ಳೆಯ ಕಾರ್ಯಗಳಿಗೆ ಪ್ರೇರಣೆ ಸಿಗುತ್ತದೆ ಎಂದು ತಿಳಿಸಿದರು.
ಪುರಿಯ ಜಗನ್ನಾಥ ಜಗದ ನಾಥನಾಗಿದ್ದಾನೆ ಎಂಬ ನಂಬಿಕೆ ವಿಶ್ವದಾದ್ಯಂತ ಇದೆ. ಹೀಗಾಗಿ ದೇಶ-ವಿದೇಶದಿಂದ ಸಾಗರೋಪಾದಿಯಲ್ಲಿ ಭಕ್ತರು ಪುರಿಗೆ ಆಗಮಿಸುತ್ತಾರೆ. ಕೃಷ್ಣನೇ ಪುರಿಯಲ್ಲಿ ಜಗನ್ನಾಥನಾಗಿ ನೆಲೆಸಿದ್ದಾನೆ. ನಾವೆಲ್ಲ ನಿಷ್ಕಲ್ಮಷ, ನಿಸ್ವಾರ್ಥಿಗಳಾದರೆ ದೇವರ ಲೀಲೆಗಳು ಗೊತ್ತಾಗುತ್ತವೆ. ಕೃಷ್ಣ ಒಳ್ಳೆಯವರನ್ನು ಎಂದೂ ಕೈಬಿಡುವುದಿಲ್ಲ ಎಂದರು.
ಪ್ರಸ್ತುತ ಒಳ್ಳೆಯ ಗುಣವುಳ್ಳವರ ಸಂಖ್ಯೆ ಕಡಿಮೆಯಾಗಿ ಕೇಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೌರವರಲ್ಲಿ ಎಲ್ಲ ಇದ್ದರೂ ಸೋತಿದ್ದು ಕೃಷ್ಣನೊಬ್ಬನಿಂದಾಗಿ. ಕೃಷ್ಣನ ಮಾತು ಕೇಳದ ಕಾರಣ ಕೌರವರು ಹೀನಾಯವಾಗಿ ಸೋಲುಂಡರು. ಕೃಷ್ಣನ ಮಾತುಗಳ ಕಣಜವೇ ಆದ ಭಗವದ್ಗೀತೆ ನಮ್ಮೆಲ್ಲರವನ್ನು ಉದ್ಧರಿಸುವ ಗ್ರಂಥವಾಗಿದೆ ಎಂದು ಹೇಳಿದರು.
ರಾಜಕುಮಾರ ಅಳ್ಳೆ ಇತರರಿದ್ದರು. ನಾಟ್ಯಶ್ರೀ ನೃತ್ಯಾಲಯದ ರಾಣಿ ಸತ್ಯಮೂರ್ತಿ ತಂಡ ನೃತ್ಯ ಹಾಗೂ ಶಿವಾನಿ ಶಿವದಾಸ ಸ್ವಾಮಿ ಸಂಗೀತ ನಡೆಸಿಕೊಟ್ಟರು. ಹೋಮ-ಹವನ, ಹರಿನಾಮ ಸಂಕೀರ್ತನೆ, ಮಹಾಮಂಗಳಾರತಿ ಬಳಿಕ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net