ಬೀದರ್ ವಿವಿ-ನಿಫ್ಟೆಮ್ ಮಧ್ಯೆ ಒಪ್ಪಂದ

bidar vv
Published on

ಬೀದರ್: ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದ ಬೆಳವಣಿಗೆ ನಿಟ್ಟಿನಲ್ಲಿ ತಮಿಳುನಾಡಿನ ತಂಜಾವೂರಿನಲ್ಲಿರುವ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆ (ನಿಫ್ಟೆಮ್)ಯೊಂದಿಗೆ ಬೀದರ್ ವಿಶ್ವವಿದ್ಯಾಲಯ ಒಪ್ಪಂದ ಮಾಡಿಕೊಂಡಿದೆ.
ಬರುವ ದಿನಗಳಲ್ಲಿ ಬೀದರ್ ವಿವಿ ಮತ್ತು ನಿಫ್ಟೆಮ್ ಪರಸ್ಪರ ಶೈಕ್ಷಣಿಕ, ಸಂಶೋಧನೆ, ಕೌಶಲ, ಔದ್ಯೋಗಿಕ ಕ್ಷೇತ್ರಗಳಲ್ಲಿ ಸಹಕಾರ, ತಂತ್ರಜ್ಞಾನ ವಿನಿಮಯದ ಒಡಂಬಡಿಕೆ ಪತ್ರಕ್ಕೆ ವಿವಿ ಕುಲಪತಿ ಪ್ರೊ.ಬಿ.ಎಸ್. ಬಿರಾದಾರ ಹಾಗೂ ನಿಫ್ಟೆಮ್ ನಿರ್ದೇಶಕ ಡಾ.ವಿ. ಪಳನಿಮುತ್ತು ಸಹಿ ಹಾಕಿದರು. ಇದರಿಂದ ಬೀದರ್ ವಿವಿ ವ್ಯಾಪ್ತಿಯ ಯುವಕರಿಗೆ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿನ ಹೊಸ ಬೆಳವಣಿಗೆಗಳ ಅಧ್ಯಯನ ಜತೆಗೆ ಉದ್ಯೋಗ ಅವಕಾಶಕ್ಕೆ ವರವಾಗಲಿದೆ.
ಈಗಾಗಲೇ ಬೀದರ್ ವಿವಿ ಕಳೆದ ಆಗಸ್ಟ್ ನಲ್ಲಿ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆ(ಸಿಪೆಟ್) ಜತೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಇಂದು ಅನೇಕ ವಿದ್ಯಾರ್ಥಿಗಳು, ನಿರುದ್ಯೋಗಿಗಳು ವಿವಿ ಆವರಣದಲ್ಲಿರುವ ಪ್ಲಾಸ್ಟಿಕ್ ತಂತ್ರಜ್ಞಾನದ ತರಬೇತಿಯಲ್ಲಿ ನಿರತರಾಗಿದ್ದಾರೆ. ನಿಫ್ಟೆಮ್ ಜತೆಗಿನ ನೂತನ ಒಪ್ಪಂದದಿಂದಾಗಿ ಈ ಭಾಗದ ಯುವಕರು ಆಹಾರ ತಂತ್ರಜ್ಞಾನ, ಕೈಗಾರಿಕೆ, ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಉನ್ನತ ಜ್ಞಾನ ಸಂಪಾದಿಸಲು ಅನುಕೂಲವಾಗುತ್ತದೆ. ಆಹಾರ ಕ್ಷೇತ್ರದಲ್ಲಿನ ವಿನೂತನ ಸಂಶೋಧನೆಗೆ ಹೊಸ ದಿಕ್ಕು, ಆವಿಷ್ಕಾರ, ಉದ್ಯೋಗ ಸೃಷ್ಟಿಗೂ ಅನುವಾಗಲಿದೆ.
ಬೀದರ್ ವಿವಿ ಆರಂಭವಾದ ಕೆಲವೇ ತಿಂಗಳಲ್ಲಿ ಕೇಂದ್ರ ಸರ್ಕಾರದಡಿ ನಡೆದಿರುವ ಇಂಥ ಮಹತ್ವದ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದು ಸಂತೋಷದ ಸಂಗತಿ ಮತ್ತು ವಿವಿ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಬರುವ ದಿನಗಳಲ್ಲಿ ಇಂಥ ಅನೇಕ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಈ ಭಾಗದ ಪ್ರಗತಿಗಾಗಿ ವಿವಿ ಅವಿರತ ಶ್ರಮಿಸಲಿದೆ ಎಂದು ಕುಲಪತಿ ಪ್ರೊ.ಬಿ.ಎಸ್. ಬಿರಾದಾರ ತಿಳಿಸಿದ್ದಾರೆ.
ಐತಿಹಾಸಿಕ ಒಪ್ಪಂದ ಸಂದರ್ಭದಲ್ಲಿ ವಿವಿಧ ವಿವಿ ಕುಲಪತಿಗಳಾದ ಪ್ರೊ.ಅಶೋಕ ಆಲೂರು ಕೊಡಗು, ಪ್ರೊ.ಗಂಗಾಧರ ಚಾಮರಾಜನಗರ, ಪ್ರೊ.ತಾರಾನಾಥ ಹಾಸನ, ಪ್ರೊ.ಸುರೇಶ ಜಂಗಮಶೆಟ್ಟಿ ಹಾವೇರಿ, ಪ್ರೊ.ರವಿ ಬಿ.ಕೆ. ಕೊಪ್ಪಳ, ಪ್ರೊ.ಆನಂದ ದೇಶಪಾಂಡೆ ಬಾಗಲಕೋಟ ಇದ್ದರು.

124 ಕಾಲೇಜು ಸಂಯೋಜನೆ
ವಿವಿ ವ್ಯಾಪ್ತಿಯಲ್ಲಿ 124 ಕಾಲೇಜು ಸಂಯೋಜನೆಗೊಂಡಿವೆ. 2023-24ರಲ್ಲಿ ಸ್ನಾತಕೋತ್ತರ ಪ್ರವೇಶ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಕುಲಪತಿ ಪ್ರೊ.ಬಿ.ಎಸ್. ಬಿರಾದಾರ ಹೇಳಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿರುವುದು ಹೆಮ್ಮೆಯ ಸಂಗತಿ. ಆರಂಭವಾದ ಕೆಲವೇ ತಿಂಗಳಲ್ಲಿ ಬೀದರ್ ವಿವಿ ಅತ್ಯಂತ ಕ್ರಿಯಾಶೀಲ ಚಟುವಟಿಕೆಯಿಂದ ಮುನ್ನಡೆಯುತ್ತಿರುವುದರಲ್ಲಿ ಇಂಥ ಮಹತ್ವದ ರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಒಪ್ಪಂದವೂ ಸೇರ್ಪಡೆಗೊಂಡಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net