ನಾಡೋಜ ಪ್ರಶಸ್ತಿ ಗೌರವ ಹೆಚ್ಚಿಸಿದ ಪಟ್ಟದ್ದೇವರು

Dr Sailendra beldale
Published on

ಬೀದರ್: ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಹಿತ್ಯಿಕ ಕ್ಷೇತ್ರದಲ್ಲಿ ಅವಿರತ ದುಡಿಯುತ್ತ ದಣಿವರಿಯದ ಸಂತ ಎನಿಸಿರುವ ಭಾಲ್ಕಿ ಹಿರೇಮಠದ ಹಿರಿಯ ಸ್ವಾಮೀಜಿ, ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರತಿಷ್ಠಿತ ನಾಡೋಜ ಗೌರವಕ್ಕೆ ಭಾಜನರಾಗಿದ್ದಕ್ಕೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಡಿಸಿಸಿ ಬ್ಯಾಂಕ್ ನಿರ್ದೇಶಕಿ ಶಕುಂತಲಾ ಬೆಲ್ದಾಳೆ ಹರ್ಷ ವ್ಯಕ್ತಪಡಿಸಿದ್ದಾರೆ.
ಆರು ದಶಕಗಳಿಂದ ಡಾ.ಪಟ್ಟದ್ದೇವರು ಸಮಾಜಕ್ಕೆ ಸಲ್ಲಿಸುತ್ತಿರುವ ಬಹುಮುಖಿ ಸೇವೆ ಮಾದರಿಯಾಗಿದೆ. ಪೂಜ್ಯರನ್ನು ನಾಡೋಜ ಗೌರವಕ್ಕೆ ಆಯ್ಕೆ ಮಾಡುವ ಮುಖಾಂತರ ಹಂಪಿ ವಿವಿ ಪ್ರಶಸ್ತಿಯ ಘನತೆ ಹೆಚ್ಚಿಸಿಕೊಂಡಿದೆ ಎಂದು ಬಣ್ಣಿಸಿದ್ದಾರೆ. ಗುರುಕುಲ ಸ್ಥಾಪಿಸುವ ಮೂಲಕ ಡಾ.ಪಟ್ಟದ್ದೇವರು ಗಡಿ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಅನಾಥ ಮಕ್ಕಳ ರಕ್ಷಕರೆನಿಸಿದ್ದಾರೆ. ನೂತನ ಅನುಭವ ಮಂಟಪದ ರೂವಾರಿಯಾಗಿದ್ದಾರೆ. ಪೂಜ್ಯರು ಸಮಾಜದಲ್ಲಿ ತ್ರಿವಿಧ ದಾಸೋಹ ಸೇವೆ ಇನ್ನಷ್ಟು ಮಾಡಲು ಈ ಗೌರವ ಪ್ರೇರಣೆ ನೀಡಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net