ಅಕ್ಕಮಹಾದೇವಿ ಸ್ತ್ರೀ ಕುಲಕ್ಕೆ ಮಾದರಿ

Vichar sankiran
Published on

ಬೀದರ್: ಮಹಿಳೆಯರ ಸಾಮಾಜಿಕ ಸ್ಥಾನಮಾನಕ್ಕಾಗಿ ವಚನ ಸಾಹಿತ್ಯದ ಮೂಲಕ ಕ್ರಾಂತಿ ನಡೆಸಿದ ಕನ್ನಡದ ಪ್ರಥಮ ಕವಯತ್ರಿ ಅಕ್ಕಮಹಾದೇವಿ ಅವರು ಸ್ತ್ರೀ ಸಮುದಾಯಕ್ಕೆ ಮಾದರಿ ಎಂದು ಹಿರಿಯ ಸಾಹಿತಿ ಭಾರತಿ ವಸ್ತ್ರದ ಹೇಳಿದರು.
ವಚನಾಮೃತ ಕನ್ನಡ ಸಂಘದಿಂದ ನಗರದಲ್ಲಿ ಏರ್ಪಡಿಸಿದ್ದ ಅಕ್ಕಮಹಾದೇವಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದಲ್ಲಿ ವೈಭವ ಮತ್ತು ಭೋಗಜೀವನ ತ್ಯಜಿಸಿ, ಅರಸೊತ್ತಿಗೆಯನ್ನು ಧಿಕ್ಕರಿಸಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಎಲ್ಲರಿಗೂ ಅಕ್ಕಳಾಗಿ ಪ್ರಭಾವಿತಳಾಗಿ ಬೆಳೆದಿದ್ದು ಅಕ್ಕಮಹಾದೇವಿ ಎಂದು ಬಣ್ಣಿಸಿದರು.
ಮಹಿಳೆಯರು ಸಂಕುಚಿತ ಮನೋಭಾವ ತೊರೆದು ವಿಶಾಲ ಪ್ರಪಂಚದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಕ್ಕ ಮಹಿಳೆಯರ ಸ್ವಾಭಿಮಾನದ ಸಂಕೇತ. ಮಹಿಳೆಯರು ಆಡಂಬರ ಬಿಟ್ಟು ಸರಳವಾದ ಜೀವನದೊಂದಿಗೆ ಜ್ಞಾನ ಮತ್ತು ಭಕ್ತಿ ಸಂಪಾದನೆಗೆ ಒಲವು ತೋರಬೇಕು ಎಂದು ತಿಳಿಹೇಳಿದರು.
ಅಕ್ಕಮಹಾದೇವಿ ವಚನಗಳಲ್ಲಿ ಕಾಣುವ ವೈಜ್ಞಾನಿಕ ಮತ್ತು ವೈಚಾರಿಕ ವಿಷಯ ಕುರಿತು ಸಾಹಿತಿ ಡಾ.ಶಿವಲೀಲಾ ಮಠಪತಿ ಮಾತನಾಡಿ, ಅಕ್ಕಮಹಾದೇವಿ ಕನ್ನಡ ನಾಡಿನ ಮೊದಲ ತತ್ವಜ್ಞಾನಿ. ಬಸವಣ್ಣ ಮತ್ತು ಅಲ್ಲಮಪ್ರಭು ಅವರ ಪ್ರಭಾವದಲ್ಲಿ ಬೆಳೆದ ಅಕ್ಕನವರು ತಮ್ಮ ವಚನಗಳಲ್ಲಿ ಗಟ್ಟಿಯಾದ ಮತ್ತು ವೈಚಾರಿಕ ಸಂಗತಿಗಳನ್ನು ಬಿಂಬಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ಸಂಘದಿಂದ 33 ವಚನಕಾರ್ತಿಯರ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿದೆ. ಶರಣೆ ಅಕ್ಕಮಹಾದೇವ ಅವರಿಂದ ಕಾರ್ಯಕ್ರಮ ಶುರು ಮಾಡಲಾಗಿದೆ ಎಂದು ಹೇಳಿದರು.
ವೈರಾಗ್ಯದ ಪ್ರತೀಕವಾಗಿರುವ ಶರಣೆ ಅಕ್ಕಮಹಾದೇವಿ ಅವರು ಮಹಿಳೆಯರಿಗೆ ಮಾತ್ರವಲ್ಲ, ಇಡೀ ಮನುಕುಲಕ್ಕೆ ಮಾದರಿ. ಯಾವುದೇ ರೀತಿಯ ಸಂಕಷ್ಟ ಎದುರಾದಾಗ ಅಕ್ಕಮಹಾದೇವಿ ಜೀವನ ಚರಿತ್ರೆ, ವಚನಗಳನ್ನು ಓದಿದರೆ ಸಾಕು, ಕಷ್ಟಗಳನ್ನು ಸಮರ್ಥವಾಗಿ ಎದುರಿಸುವ ಮನೋಬಲ ಸಿಗುತ್ತದೆ ಎಂದು ಹೇಳಿದರು.
ರೇಣುಕಾ ಎನ್.ಬಿ. ಉಪನ್ಯಾಸ ನೀಡಿದರು. ಅಶೋಕ ಬೂದಿಹಾಳ ಮಾತನಾಡಿದರು. ಪ್ರಮುಖರಾದ ಪರಮೇಶ್ವರ ಬಿರಾದಾರ, ಶ್ರೀಕಾಂತ ಬಿರಾದಾರ, ಬಸವರಾಜ ರುದನೂರ, ಗಂಗಶೆಟ್ಟಿ ಖಾನಾಪುರ, ಸಂತೋಷ ಮಂಗಳೂರೆ, ರಾಜಶೇಖರ ಮಂಗಲಗಿ, ರಾಮಚಂದ್ರ ಗಣಾಪುರ, ಬಸವರಾಜ ಬಲ್ಲೂರ, ರೇಣುಕಾ ಮಳ್ಳಿ, ಶ್ರೇಯಾ ಮಹೀಂದ್ರಕರ್ ಇತರರಿದ್ದರು. ಡಾ.ದೀಕ್ಷಾ ಮಾಸಿಮಾಡೆ ಸ್ವಾಗತಿಸಿದರು. ಪ್ರೊ.ಸ್ವರೂಪರಾಣಿ ನಾಗೂರೆ ನಿರೂಪಣೆ ಮಾಡಿದರು. ಶ್ರೀದೇವಿ ಸೋಮಶೆಟ್ಟಿ ವಂದಿಸಿದರು. ಸಾಧಕರಾದ ಶಿವಾನಿ ಶಿವದಾಸ ಸ್ವಾಮಿ ಮತ್ತು ರವಿಕುಮಾರ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net