ಪಟ್ಟದ್ದೇವರ ಸಮಾಜ ಸೇವೆ ಮಾದರಿ

7blk1
Published on

ಭಾಲ್ಕಿ: ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸೇವೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಗೌರವಕ್ಕೆ ಭಾಜನರಾಗಿರುವ ಹಿನ್ನೆಲೆಯಲ್ಲಿ ಪೂಜ್ಯರನ್ನು ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಸನ್ಮಾನಿಸಿದ ಅವರು, ಅಪ್ಪಟ ಬಸವತತ್ವ ಅನುಯಾಯಿಯಾದ ಶ್ರೀಗಳು, ಬಸವತತ್ವ ಪ್ರಸಾರ ಜತೆಗೆ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ವಿಶೇಷವಾಗಿ ಹೆತ್ತವರಿಗೆ ಬೇಡವಾದ ಮಕ್ಕಳನ್ನು ಕರೆತಂದು ಪಾಲನೆ ಪೋಷಣೆ ಮಾಡಿ ಶಿಕ್ಷಣ, ಸಂಸ್ಕಾರ ನೀಡಿ ಉತ್ತಮ ನಾಗರಿಕರನ್ನಾಗಿ ರೂಪಿಸುತ್ತಿರುವ ಪಟ್ಟದ್ದೇವರ ಕಾರ್ಯ ಶ್ಲಾಘನೀಯ ಎಂದರು.
ಕೆಲವರು ಪ್ರಶಸ್ತಿ, ಪುರಸ್ಕಾರಗಳ ಹಿಂದೆ ಬೀಳುವುದನ್ನು ಕಂಡಿದ್ದೇವೆ. ಆದರೆ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಎಂದಿಗೂ ಪ್ರಶಸ್ತಿಗಾಗಿ ಕೆಲಸ ಮಾಡಿದವರಲ್ಲ. ಪೂಜ್ಯರ ಅನುಪಮ ಸೇವೆ ಗುರುತಿಸಿ ಸರ್ಕಾರ ಸೇರಿ ವಿವಿಧ ಸಂಘ-ಸಂಸ್ಥೆಗಳು ಅನೇಕ ಪ್ರಶಸ್ತಿ ನೀಡಿ ಗೌರವಿಸಿವೆ. ಇದೀಗ ಹಂಪಿ ಕನ್ನಡ ವಿವಿ ನಾಡೋಜ ಗೌರವಕ್ಕೆ ಆಯ್ಕೆ ಮಾಡಿದ್ದು ಶ್ರೀಮಠದ ಭಕ್ತನಾಗಿ ನನಗೆ ಹೆಮ್ಮೆ ತರಿಸಿದೆ. ಪೂಜ್ಯರ ಸಮಾಜ ಸೇವೆ ಹೀಗೆ ಮುಂದುವರಿಯಲಿ ಎಂದು ಆಶಿಸಿದರು.
ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಭಾಲ್ಕಿ ಹಿರೇಮಠದ ಲಿಂ. ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಆಶೀರ್ವಾದ, ಶಕ್ತಿಯಿಂದ ಸಮಾಜದಲ್ಲಿ ಒಂದಿಷ್ಟು ಒಳ್ಳೆಯ ಕೆಲಸ ಮಾಡಲು ಪ್ರಯತ್ನಿಸಿರುವೆ. ವೈಯಕ್ತಿಕವಾಗಿ ಏನೇ ಪ್ರಶಸ್ತಿ, ಪುರಸ್ಕಾರ ಲಭಿಸಿದರೂ ಪೂಜ್ಯರ ಪಾದಗಳಿಗೆ ಸಮರ್ಪಿಸುತ್ತೇನೆ. ನಾವು ಹೋಗುವ ದಾರಿ ಸರಿಯಿದ್ದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಜಿಪಂ ಮಾಜಿ ಸದಸ್ಯ ಅಂಬಾದಾಸ ಕೋರೆ, ಪ್ರಥಮ ದರ್ಜೆ ಗುತ್ತಿಗೆದಾರ ಸಂಗಮೇಶ ಹುಣಜೆ, ಪ್ರಮುಖರಾದ ರವೀಂದ್ರ ಚಿಡಗುಪ್ಪೆ, ಕಾಶೀನಾಥ ಲದ್ದೆ, ಶೈಲೇಶ ಚಳಕಾಪುರೆ, ಮೋಹನರಡ್ಡಿ, ಲೋಕೋಪಯೋಗಿ ಇಲಾಖೆ ಇಇ ಶಿವಶಂಕರ ಕಾಮಶೆಟ್ಟಿ, ಎಇಇ ಅಲ್ತಾಫ್ಮಿಯಾ ಇತರರಿದ್ದರು. ಬಾಬು ಬೆಲ್ದಾಳ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net