ಮಾಂಜಾ ದಾರ ಮಾರಾಟ ಬಳಕೆ ನಿಷೇಧ

J.S. Nyamgoud
Published on

ಹುಮನಾಬಾದ್: ಪ್ರಾಣಿ-ಪಕ್ಷಿ ಮತ್ತು ಮನುಷ್ಯರ ಜೀವಕ್ಕೆ ಅಪಾಯ ತರಬಲ್ಲ ಗಾಳಿಪಟ ಹಾರಿಸಲು ಬಳಸುವ ಗಾಜಿನ ಪುಡಿಲೇಪಿತ ಮಾಂಜಾ ದಾರ ಬಳಕೆಗೆ ನಿಷೇಧವಿದೆ. ಹೀಗಾಗಿ ಮಾಂಜಾ ದಾರ ಮಾರಾಟ ಮಾಡುವವರು ಮತ್ತು ಗಾಳಿಪಟ ಹಾರಿಸಲು ಈ ದಾರ ಬಳಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಡಿವೈಎಸ್ಪಿ ಜೆ.ಎಸ್. ನ್ಯಾಮೇಗೌಡ ಹೇಳಿದ್ದಾರೆ.
ಪಟ್ಟಣದಲ್ಲಿ ವ್ಯಾಪಾರಸ್ಥರ ಸಭೆ ನಡೆಸಿದ ಅವರು, ಈ ಭಾಗದಲ್ಲಿ ಮಕರ ಸಂಕ್ರಾತಿ ನಿಮಿತ್ತ ಗಾಳಿಪಟ ಹಾರಿಸುವುದು ವಾಡಿಕೆ. ಹತ್ತಿ ದಾರದಿಂದ ಗಾಳಿಪಟ ಹಾರಿಸಬಹುದು. ಆದರೆ ನಿಷೇಧಿತ ಮಾಂಜಾ ದಾರ ಬಳಸಬಾರದು ಎಂದರು.
ಮಾಂಜಾ ದಾರವನ್ನು ಗಾಜು ಇತರ ವಸ್ತುಗಳಿಂದ ತಯಾರಿಸಿದ್ದರಿಂದ ಚೂಪಾಗಿ ಇರಲಿದ್ದು, ಮನುಷ್ಯ ಹಾಗೂ ಪ್ರಾಣಿ-ಪಕ್ಷಿಗಳ ಜೀವಕ್ಕೆ ಅಪಾಯ ತರಲಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಗಾಳಿಪಟ ಹಾರಿಸಲು ಮಾಂಜಾ ದಾರ ಬಳಸಲಾಗುತ್ತಿದೆ. ಈ ದಾರ ಕಡಿದು ಅಲ್ಲಲ್ಲಿ ರಸ್ತೆ ನಡುವೆ ಕಂಬ, ಸಾರ್ವಜನಿಕ ಸ್ಥಳಗಳಲ್ಲಿ ಜೋತು ಬೀಳುತ್ತಿದೆ. ಬೈಸಿಕಲ್, ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳು ಮಾಂಜಾ ದಾರಕ್ಕೆ ಸಿಲುಕಿ ಗಾಯಗೊಂಡಿರುವ ಅನೇಕ ಪ್ರಕರಣಗಳು ವಿವಿಧೆಡೆ ಜರುಗಿವೆ ಎಂದು ತಿಳಿಸಿದರು.
ಹುಮನಾಬಾದ್ ಹಾಗೂ ಬಸವಕಲ್ಯಾಣಗಳಲ್ಲಿ ಮಾಂಜಾ ದಾರದಿಂದ ಹಲವು ಅವಘಡ ಸಂಭವಿಸಿದ ಉದಾಹರಣೆಗಳೂ ಇವೆ. ಹೀಗಾಗಿ ಸಾರ್ವನಿಕರ ಸಂರಕ್ಷಣೆ ಹಿತದೃಷ್ಟಿಯಿಂದ ಹುಮನಾಬಾದ್ ಪೊಲೀಸ್ ಉಪ ವಿಭಾಗ ವ್ಯಾಪ್ತಿಯ ಹುಮನಾಬಾದ್, ಚಿಟಗುಪ್ಪ, ಬಸವಕಲ್ಯಾಣ, ಹುಲಸೂರು ತಾಲೂಕು ವ್ಯಾಪ್ತಿಯಲ್ಲಿ ಗಾಳಿಪಟ ಮಾರುವವರು ಮಾಂಜಾ ದಾರ ಮಾರಾಟ, ಬಳಕೆ ಮಾಡುವಂತ್ತಿಲ್ಲ ಎಂದರು.
ತಹಸೀಲ್ದಾರ್ ಅಂಜುಂ ತಬಸ್ಸುಮ್, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ, ಸಿಪಿಐ ಗುರು ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net