ಮೊಬೈಲ್ ಬಿಟ್ಟು ಕ್ರೀಡೆಗೆ ಸಮಯ ಕೊಡಿ

Cricket
Published on

ಬೀದರ್: ಮೊಬೈಲ್ ಬಳಕೆಗೆ ಕೊಡುವ ಸಮಯವನ್ನು ಕ್ರೀಡೆಗಳಿಗೆ ಮೀಸಲಿಡಿ. ಇದರಿಂದ ದೈಹಿಕ, ಮಾನಸಿಕ ಸದೃಢತೆ ಪಡೆಯಲು ಸಾಧ್ಯವಿದೆ ಎಂದು ಚಿದಂಬರಾಶ್ರಮದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಹೇಳಿದರು.
ಅಟಲ್ ಬಿಹಾರ ವಾಜಪೇಯಿ ಜನ್ಮದಿನ ನಿಮಿತ್ತ ಅಟಲ್ ಫೌಂಡೇಷನ್ ನಿಂದ ಹಮ್ಮಿಕೊಂಡಿದ್ದ ಮೋದಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೂರು ದಿನ ಹಮ್ಮಿಕೊಂಡಿದ್ದ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿ, ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಿದರೆ ಮೊಬೈಲ್ ಉತ್ತಮ. ಆದರೆ ಪ್ರಸ್ತುತ ಮೊಬೈಲ್ ಇಲ್ಲದೆ ಜೀವನ ಇಲ್ಲ ಎನ್ನುವಂತಾಗಿದೆ. ಇದನ್ನು ಹೋಗಲಾಡಿಸಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆಗಳತ್ತ ಆಸಕ್ತಿ ವಹಿಸಬೇಕು ಎಂದರು.
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ ಸದೃಢವಾಗುತ್ತೇವೆ. ಆಟದಲ್ಲಿ ಸೋಲು-ಗೆಲುವು ಸಾಮಾನ್ಯ. ನಾವು ಭಾಗವಹಿಸುವುರು ಬಹಳ ಮುಖ್ಯ. ಸಮಾಜದಲ್ಲಿನ ಚಟುವಟಿಕೆಗಳನ್ನು ಅರಿತುಕೊಳ್ಳಲು ಶಿಕ್ಷಣ ಎಷ್ಟು ಮುಖ್ಯವೋ, ಅದರಂತೆ ರೋಗಮುಕ್ತ ಜೀವನ ಸಾಗಿಸಲು ಕ್ರೀಡೆ ಬೇಕು. ಜಿಲ್ಲೆಯ ಯುವಕರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗುರುನಾಥ ಕೊಳ್ಳುರ್ ಅವರು ಕ್ರಿಕೆಟ್ ಟೂರ್ನಿ ಆಯೋಜಿಸಿದ್ದು ಶ್ಲಾಘನೀಯ ಎಂದು ಹೇಳಿದರು.
ಅಟಲ್ ಫೌಂಡೇಷನ್ ಅಧ್ಯಕ್ಷ ಗುರುನಾಥ ಕೊಳ್ಳುರ್ ಮಾತನಾಡಿ, ಬೀದರ್ ಲೋಕಸಭೆ ಕ್ಷೇತ್ರದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ನಡೆದ ಮೋದಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಮೂರು ದಿನ ಹಮ್ಮಿಕೊಳ್ಳಲಾಗಿದೆ. ವಿಜೇತ ತಂಡಕ್ಕೆ ಒಂದು ಲಕ್ಷ ರೂ. ಮತ್ತು ರನ್ನರ್ ಅಪ್ ಗೆ 50 ಸಾವಿರ ರೂ. ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು ಎಂದರು.
ಅಟಲ್ ಫೌಂಡೇಷನ್ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಮಾತನಾಡಿ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿದೆ. ಜ.8 ರವರೆಗೆ ನಿತ್ಯ ಸಂಜೆ 5ರಿಂದ ಹೊನಲು ಬೆಳಕಿನಲ್ಲಿ ಪಂದ್ಯಗಳು ನಡೆಯಲಿವೆ. ಕ್ರಿಕೆಟ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಮಾಜಿ ಶಾಸಕ ಸುಭಾಷ ಕಲ್ಲೂರ್, ಪ್ರಮುಖರಾದ ಸೋಮಶೇಖರ ಪಾಟೀಲ್ ಗಾದಗಿ, ಶರಣಪ್ಪ ಸಿಕನಪುರೆ, ಗುರುನಾಥ ಜ್ಯಾಂತಿಕರ್, ಹಾವಶೆಟ್ಟಿ ಪಾಟೀಲ್, ಪ್ರಭುರಾವ ವಸ್ಮತೆ, ಬಾಬುರಾವ ಕಾರಬಾರಿ, ಸಚಿನ್ ಕೊಳ್ಳುರ್, ಡಾ.ವಿ.ವಿ. ನಾಗರಾಜ, ಕುಶಾಲ ಪಾಟೀಲ್ ಗಾದಗಿ, ಶಶಿಧರ ಹೊಸಳ್ಳಿ, ಗುರುನಾಥ ರಾಜಗೀರಾ, ವೀರೇಶ ಸ್ವಾಮಿ, ಬಸವ ಮೂಲಗೆ, ರಾಜು ಚಿಂತಾಮಣಿ, ಅನೀಲ ದೇಶಮುಖ, ಸಂಜಯ ಜಾಧವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net