371 ಸಮರ್ಪಕ ಅನುಷ್ಠಾನ ಆಗುತ್ತಿಲ್ಲ

371 kalam photo
Published on

ಬೀದರ್: ಸರ್ಕಾರದ ಉದಾಸೀನತೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳಲ್ಲಿನ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಕಲಂ 371(ಜೆ) ಸಮರ್ಪಕವಾಗಿ ಜಾರಿಯಾಗದೆ ಜನರು ವಿವಿಧ ಲಾಭಗಳಿಂದ ವಂಚಿತರಾಗುತ್ತಿದ್ದಾರೆ ಎಂದು 371 (ಜೆ) ಸಮಗ್ರ ಅನುಷ್ಠಾನ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಹಿರಿಯ ನ್ಯಾಯವಾದಿ ಅಶೋಕಕುಮಾರ ಮಾನೂರೆ ಅತೃಪ್ತಿ ವ್ಯಕ್ತಪಡಿಸಿದರು.
ನಗರದ ಕಲಂ 371(ಜೆ) ಸಮಗ್ರ ಅನುಷ್ಠಾನ ಹೋರಾಟ ಸಮಿತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 371 ಜಾರಿಯಾದ ದಿನಾಚರಣೆಯಲ್ಲಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗಿದೆ. ಆದರೆ ನೇಮಕಾತಿಯಲ್ಲಿ ಸೂಕ್ತ ಮೀಸಲಾತಿ ಕೊಡುವಲ್ಲಿ ಸರ್ಕಾರ ಸರಿಯಾದ ಕಾನೂನುಗಳು ರೂಪಿಸಿಲ್ಲ. ಇದರಲ್ಲಿ ಆಗಾಗ್ಗೆ ಅನೇಕ ಗೊಂದಲಗಳನ್ನು ಸೃಷ್ಟಿಸಲಾಗುತ್ತಿದೆ. ಹೀಗಾಗಿ ಸಂವಿಧಾನಬದ್ಧ ಹಕ್ಕುಗಳು ಸಿಕ್ಕಿದರೂ ಅದರ ಪರಿಪೂರ್ಣ ಲಾಭ ದೊರಕುತ್ತಿಲ್ಲ ಎಂದು ದೂರಿದರು.
ಈ ಭಾಗದ ಜನಪ್ರತಿನಿಧಿಗಳು 371 ಸಮರ್ಪಕ ಅನುಷ್ಠಾನದ ನಿಟ್ಟಿನಲ್ಲಿ ಬದ್ಧತೆ ಹಾಗೂ ಗಂಭೀರತೆ ಪ್ರದರ್ಶಿಸವೇಕು. ಈ ಸಂಬಂಧ ರಾಜ್ಯಪಾಲರ ಮೇಲೆ ಒತ್ತಡ ಹೇರಿ ಸಮಗ್ರ ಅನುಷ್ಠಾನಕ್ಕೆ ಮುಂದಾಗಬೇಕು. ಇದರ ಸಮರ್ಪಕ ಜಾರಿಯಿಂದ ಈ ಭಾಗದ ನಿರುದ್ಯೋಗಿಗಳಿಗೆ ನ್ಯಾಯ ಸಿಗಬಹುದು. ಇದಕ್ಕೆ ಪೂರಕವಾಗಿ ಸಮಿತಿ ಹೋರಾಟ ನಡೆಸಿದೆ. ವಿಧಾನಸೌಧದಲ್ಲಿರುವ ಎಲ್ಲ ಇಲಾಖೆಗಳು ಕಲಬುರಗಿಯಲ್ಲಿ ಸ್ಥಾಪಿಸಬೇಕು. ಈ ಭಾಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಗೊಳಿಸಬೇಕು ಎಂದು ಆಗ್ರಹಿಸಿದರು.
371(ಜೆ) ಕಲಂ ಜಾರಿಯಲ್ಲಿ ದಿ.ವೈಜನಾಥ ಪಾಟೀಲ್ ಅವರ ನೇತೃತ್ವದಲ್ಲಿ 20 ವರ್ಷ ನಿರಂತರ ನಡೆದಿರುವ ಹೋರಾಟ ಪ್ರಮುಖ ಪಾತ್ರ ವಹಿಸಿದೆ. ಈ ಸಂಘರ್ಷದ ಫಲವಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು 2013ರ ಜನವರಿ 1ರಂದು ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ಮಾಡಲು ರಾಜ್ಯಪಾಲರಿಗೆ ಅಧಿಕಾರವನ್ನು ನೀಡಲಾಗಿದೆ. ಎಲ್ಲರೂ ಸೇರಿ ಪ್ರಯತ್ನಿಸಿದರೆ ಈ ಭಾಗಕ್ಕೆ 371 ಕಲಂ ಪ್ರಕಾರ ಇನ್ನಷ್ಟು ಸೌಲಭ್ಯ ಸಿಗಲಿವೆ ಎಂದು ಪ್ರತಿಪಾದಿಸಿದರು.
ಡಾ. ಉಮಾಕಾಂತ ಪಾಟೀಲ್, ಶಿವಕಾಂತ ಮೂಲಗೆ ಮಾತನಾಡಿದರು. ಶರಣಮ್ಮ ಬಿರಾದಾರ, ಕೆ.ಎಚ್.ಪಾಟೀಲ್, ವೀರಶೆಟ್ಟಿ ಚನ್ನಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net