ಹಲಬರ್ಗಾದಲ್ಲಿ ಸಿದ್ಧರಾಮೇಶ್ವರ ಜಾತ್ರೆ ಆರಂಭ

Halbarga 1
Published on

ಬೀದರ್: ರಾಚೋಟೇಶ್ವರ ಸಂಸ್ಥಾನ ಮಠದ ಸಿದ್ಧರಾಮೇಶ್ವರ ನಮ್ಮೂರ 11ನೇ ಜಾತ್ರಾ ಮಹೋತ್ಸವ ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಸಡಗರ, ಸಂಭ್ರಮದೊಂದಿಗೆ ಆರಂಭಗೊಂಡಿತು.
ಮೊದಲ ದಿನ ಮಠದಲ್ಲಿ ಮಹಾದೇವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ನೂತನ ಕರಿಬಸವೇಶ್ವರ ಉದ್ಯಾನ ಉದ್ಘಾಟನೆ, ಸಿದ್ಧರಾಮೇಶ್ವರರು ತೋಡಿದ ಬಾವಿಯ ಜಲಕ್ಕೆ ಸುಮಂಗಲೆಯರಿಂದ ಪೂಜೆ, ಧರ್ಮಸಭೆ, ಅನ್ನ ಪ್ರಸಾದ ವಿತರಣೆ ಮೊದಲಾದ ಕಾರ್ಯಕ್ರಮಗಳು ನೆರವೇರಿದವು.
ಎಲ್ಲವೂ ದೇವರು ಕೊಟ್ಟ ದಾನ: ಭೂಮಿ, ಜಲ, ವಾಯು ಸೇರಿದಂತೆ ಎಲ್ಲವೂ ಮಾನವನಿಗೆ ದೇವರು ಕೊಟ್ಟ ದಾನವಾಗಿದೆ. ಭಗವಂತನಿಗೆ ಎಲ್ಲರೂ ಕೃತಜ್ಞರಾಗಿರಬೇಕು. ದೇವರ ಕೃಪೆಗೆ ಜಪ, ತಪ, ಧ್ಯಾನ ಮಾಡಬೇಕು ಎಂದು ಜಾತ್ರೆಯ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ ನುಡಿದರು.
ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನಾಡಿನ ಮಠ ಮಾನ್ಯಗಳ ಕೊಡುಗೆ ಅನನ್ಯವಾಗಿದೆ ಎಂದು ತಿಳಿಸಿದರು.
ಹೊಸ ವರ್ಷವನ್ನು ಭಾರತೀಯ ಸಂಸ್ಕøತಿಯೊಂದಿಗೆ ಆಚರಿಸಬೇಕು. ಲಿಂಗಪೂಜೆ ಮಾಡಿ ಬರಮಾಡಿಕೊಳ್ಳಬೇಕು ಎಂದು ಹೇಳಿದರು.
ಹಣತೆಯಿಂದ ಹೇಗೆ ಮನೆಯಲ್ಲಿನ ಅಂಧಕಾರ ದೂರವಾಗುತ್ತದೆಯೋ ಹಾಗೆಯೇ ಗುರುವಿನ ವಾಣಿ ಆಲಿಸುವುದರಿಂದ ಜೀವನ ಪ್ರಕಾಶಿಸುತ್ತದೆ ಎಂದು ನೇತೃತ್ವ ವಹಿಸಿದ್ದ ಮಠದ ಪೀಠಾಧಿಪತಿ ಹಾವಲಿಂಗೇಶ್ವರ ಶಿವಾಚಾರ್ಯ ನುಡಿದರು.
ಗುರುವಿನ ಗುಲಾಮನಾಗುವತನಕ ಸಿಗದಣ್ಣ ಮುಕ್ತಿ ಎನ್ನುವ ವಾಣಿ ಗುರುವಿನ ಮಹತ್ವವನ್ನು ಸಾರುತ್ತದೆ. ಗುರು ಭಕ್ತನ ಉದ್ಧಾರವನ್ನೇ ಬಯಸುತ್ತಾನೆ. ಮುಕ್ತಿಯ ಮಾರ್ಗ ತೋರುತ್ತಾನೆ. ಭಗವಂತ ಸಾಮಿಪ್ಯಕ್ಕೆ ಕರೆದೊಯ್ಯುತ್ತಾನೆ ಎಂದು ತಿಳಿಸಿದರು.
ಕೋನಮೆಳಕುಂದಾದ ಭಕ್ತರು ನಾಣ್ಯಗಳಿಂದ ಹಾವಲಿಂಗೇಶ್ವರ ಶಿವಾಚಾರ್ಯರ ತುಲಾಭಾರ ಮಾಡಿದರು. ಮುಖಂಡ ಶಿವರಾಜ ಹಂಪಾ ಬೆಳ್ಳಿಯಿಂದ ರಾಚೋಟೇಶ್ವರ ಮೂರ್ತಿ ತುಲಾಭಾರ ಮಾಡಿ ಭಕ್ತಿ ಸಮರ್ಪಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿಬಾಯಿ ಶಿವಪಾಲ್‍ಸಿಂಗ್ ಠಾಕೂರ್ ಜಾತ್ರೆಗೆ ಚಾಲನೆ ನೀಡಿದರು. ಭಾತಂಬ್ರಾದ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಹಣೆಗಾಂವ್‍ನ ಶಂಕರಲಿಂಗ ಶಿವಾಚಾರ್ಯ, ಕೌಳಾಸದ ಬಸವಲಿಂಗ ಶಿವಾಚಾರ್ಯ ಸಮ್ಮುಖ ವಹಿಸಿದ್ದರು.
ಕಿರಿಯ ಎಂಜಿನಿಯರ್ ಆಕಾಶ ಹೊಂಡಾಳೆ, ಕೋನಮೆಳಕುಂದಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಮಾನಕಾರ, ಪ್ರಮುಖರಾದ ರಮೇಶ ಪಾಂಚಾಳ  ರೇವಣಪ್ಪ ಮೂಲಗೆ, ರಮೇಶ ಪ್ರಭಾ, ಧನರಾಜ ಪಾಟೀಲ, ರಾಜಕುಮಾರ ಚಲುವಾ, ಗೋವಿಂದಸಿಂಗ್ ಠಾಕೂರ್, ಪ್ರಸಾದ ದಾಸೋಹಿ ಬ್ರಿಜ್‍ಪಾಲ್‍ಸಿಂಗ್(ಪಿಂಟು) ಠಾಕೂರ್, ಘಾಳೆಪ್ಪ ನಾಗೂರೆ, ರಾಜಕುಮಾರ ಕುಂಬಾರ ಮತ್ತಿತರರು ಇದ್ದರು. ಜಾತ್ರೆ ಜ. 11 ರವರೆಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net