ದಾಸೋಹ ಕೇಂದ್ರಗಳಿಗೆ ಅಕ್ಕಿ ಒದಗಿಸಿ

1BK3
Published on

ಬಸವಕಲ್ಯಾಣ: ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣದ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುವ ಯಾತ್ರಿಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು, ಮೂಲಸೌಕರ್ಯ ಜತೆ ದಾಸೋಹ ವ್ಯವಸ್ಥೆ ಮಾಡುವ ಅಗತ್ಯವಿದೆ. ಹೀಗಾಗಿ ಇಲ್ಲಿಯ ದಾಸೋಹ ಕೇಂದ್ರಗಳಿಗೆ ಆಹಾರ ಇಲಾಖೆಯಿಂದ ಪ್ರತಿ ತಿಂಗಳು 100 ಕ್ವಿಂಟಾಲ್ ಅಕ್ಕಿ ಒದಗಿಸುವಂತೆ ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿಪತ್ರ ಸಲ್ಲಿಸಿದ ಅವರು, ಒಂದೂವರೆ ವರ್ಷದಿಂದ ಬಸವಕಲ್ಯಾಣದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ತೀವ್ರ ಗತಿಯಲ್ಲಿ ಹೆಚ್ಚುತ್ತಿದೆ. ಹೀಗಾಗಿ ಬಸವ ಧರ್ಮ ಪೀಠ, ಅನುಭವ ಮಂಟಪ ಟ್ರಸ್ಟ್ ಹಾಗೂ ಬಸವೇಶ್ವರ ದೇವಸ್ಥಾನದ ದಾಸೋಹ ಕೇಂದ್ರಗಳಿಗೆ ಮಾಸಿಕ 100 ಕ್ವಿಂಟಾಲ್ ಅಕ್ಕಿ ಕೊಡಿಸುವಂತೆ ಕೋರಿದ್ದಾರೆ.
ಬಸವಕಲ್ಯಾಣ ಕ್ಷೇತ್ರವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 200 ಕೋಟಿ ಅನುದಾನ ಮಂಜೂರು ಮಾಡಬೇಕು. ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಪ್ರವಾಸಿಗರು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತಿದ್ದು, ದಶಕಗಳಿಂದ ನನೆಗುದಿಗೆ ಬಿದ್ದಿರುವ ರಿಂಗ್ ರಸ್ತೆ ಕಾಮಗಾರಿಗೆ ಚಾಲನೆ ಜತೆಗೆ ಇತರ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಒದಗಿಸುವಂತೆ ಸಿಎಂ ಗಮನ ಸೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net