ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಸೇರಕೂಡದು

Souharda sahakar din
Published on

ಬೀದರ್: ಶತಮಾನದ ಇತಿಹಾಸವಿರುವ ಸಹಕಾರಿ ಚಳವಳಿಗೆ ಸೌಹಾರ್ದ ಸಹಕಾರಿ ಹೊಸ ಚೈತನ್ಯ ತುಂಬಿ ಯುವಕರು, ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಗುರುನಾಥ ಜ್ಯಾಂತಿಕರ್ ಹೇಳಿದರು.
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಕಲಬುರಗಿ ಪ್ರಾಂತೀಯ ಕಚೇರಿಯಿಂದ ಬೀದರ್ ಸಂಪರ್ಕ ಕಚೇರಿಯಲ್ಲಿ ಆಯೋಜಿಸಿದ್ದ ಸೌಹಾರ್ದ ಸಹಕಾರಿ ದಿನಾಚರಣೆಯಲ್ಲಿ ಸಹಕಾರಿ ಧ್ವಜಾರೋಹಣ ನೆರವೇರಿಸಿದ ಅವರು, ಸೌಹಾರ್ದ ಕಾಯ್ದೆ ಜಾರಿಗೆ ಬಂದು 24 ವರ್ಷವಾಗಿದೆ. ರಾಜ್ಯದಲ್ಲಿ ಈ ಕಾಯ್ದೆ ಅಡಿ 6000ಕ್ಕೂ ಹೆಚ್ಚು ಸೌಹಾರ್ದ ಸಹಕಾರಿಗಳು ನೋಂದಣಿಯಾಗಿವೆ. ಸೌಹಾರ್ದ ಚಳವಳಿ ಸ್ವತಂತ್ರವಾಗಿ ಬೆಳೆಯಬೇಕು. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಮತ್ತು ಅಧಿಕಾರಿಗಳ ಹಸ್ತಕ್ಷೇಪ ಇರಕೂಡದು ಎಂದರು.
ಸಹಕಾರಿ ನಿರ್ದೇಶಕ ಜಗನ್ನಾಥ ಕರಂಜೆ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ ಅನೇಕ ರಾಜಕಾರಣಿಗಳನ್ನು ಸಹಕಾರಿ ಚಳವಳಿ ಬೆಳೆಸಿದೆ. ಈ ಕ್ಷೇತ್ರ ರಾಜ್ಯ ಮಟ್ಟದ ನಾಯಕರನ್ನು ನೀಡಿದೆ. ಆದರೆ ಇದೇ ಜಿಲ್ಲೆಯಲ್ಲಿ ಕಬ್ಬು ಬೆಳೆದ ರೈತ ಸಂಕಷ್ಟದಲ್ಲಿದ್ದಾನೆ. ಜಿಲ್ಲೆಯ ಸಹಕಾರ ಕಾರ್ಖಾನೆಗಳು ರೈತರ ನೆರವಿಗೆ ಬಾರದ್ದರಿಂದ ಬೇರೆ ರಾಜ್ಯಗಳಿಗೆ ಕಬ್ಬು ಸಾಗಿಸುವ ದುಸ್ಥಿತಿ ಬಂದಿದೆ. ಇದಕ್ಕೆ ಅಗತ್ಯ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
ರಾಜಶೇಖರ ನಾಗಮೂರ್ತಿ ಮಾತನಾಡಿ, ರೈತರಿಗೆ ಸಹಕಾರಿಗಳ ಮೂಲ ಕೇವಲ ಬೆಳೆ ಸಾಲ ನೀಡಿದರೆ ಸಾಲದು. ಯಾವ್ಯಾವ ಬೆಳೆಗಳು ಲಾಭ ನೀಡುತ್ತವೆ? ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ನೀಡುವ ಬೆಳೆಗಳ ಬಗ್ಗೆ ತಿಳಿವಳಿಕೆ ನೀಡಬೇಕಾಗಿದೆ ಎಂದರು.
ಪ್ರಮುಖರಾದ ಸಂಜಯ ಕ್ಯಾಸಾ, ಶ್ರೀಕಾಂತ ಸ್ವಾಮಿ ಸೋಲಪುರ, ಸಂಜೀವಕುಮಾರ ಸಜ್ಜನ್, ನಾಗಶೆಟ್ಟಿ ಪಾಟೀಲ್, ಡಾ.ಅಣ್ಣಾರಾವ ನಾವದಗೇರಿ, ಡಾ.ಬಸವರಾಜ ದಾಬಕೆ, ಶಿವಶಂಕರ ಬೇಮಳಗಿ, ಪ್ರವೀಣ ಮಠ, ವಿಜಯಕುಮಾರ ಗಾಜರೆ, ನಾಗೇಶ ಕರ್ಣಿ, ಶಿವರಾಜ ಹೂಗಾರ, ಅಮೃತ ಹೊಸಮನಿ, ರಾಹುಲ್ ಪೋಲಾ ಇದ್ದರು. ಸಂಜೀವಕುಮಾರ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ವೀರಶಟ್ಟಿ ಕಾಮಣ್ಣಾ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net