ಕರವೇ ಕಾರ್ಯಕರ್ತರ ಬಿಡುಗಡೆಗೆ ಆಗ್ರಹ

Karave
Published on

ಬೀದರ್: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ಟಿ.ಎ. ನಾರಾಯಣಗೌಡ ಹಾಗೂ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ವೇದಿಕೆಯ ಜಿಲ್ಲಾ ಘಟಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ನೇತೃತ್ವದಲ್ಲಿ ಪದಾಧಿಕಾರಿಗಳು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿ ಅಂಗಡಿ ಮುಂಗಟ್ಟು ಸೇರಿದಂತೆ ಎಲ್ಲ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಬಳಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಸಿದ ಪ್ರತಿಭಟನೆ ವೇಳೆ ಸುಳ್ಳು ಪ್ರಕರಣ ದಾಖಲಿಸಿ ನಾರಾಯಣ ಗೌಡ ಹಾಗೂ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಿರುವುದು ಖಂಡನೀಯವಾಗಿದೆ ಎಂದು ಸೋಮನಾಥ ಮುಧೋಳ ಹೇಳಿದರು.
ಅಂಗಡಿಗಳ ಮೇಲೆ ಕನ್ನಡ ನಾಮಫಲಕಕ್ಕಾಗಿ ವೇದಿಕೆ ಮೂರು ತಿಂಗಳಿಂದ ಜನಜಾಗೃತಿ ಅಭಿಯಾನ ನಡೆಸುತ್ತ ಬಂದಿದೆ. ಅದಾಗಿಯೂ ಅದನ್ನು ಕಡೆಗಣಿಸಲಾಗಿತ್ತು. ಹೀಗಾಗಿ ವೇದಿಕೆಯಿಂದ ಪ್ರತಿಭಟನೆ ನಡೆಸಲಾಗಿದೆ ಎಂದು ಹೇಳಿದರು.
ನಾರಾಯಣಗೌಡ ಹಾಗೂ ಕಾರ್ಯಕರ್ತರ ಬಿಡುಗಡೆಗೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.
ವೇದಿಕೆಯ ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ ಸುನಿಲ್ ಬೇಲೂರೆ, ಬೀದರ್ ತಾಲ್ಲೂಕು ಯುವ ಘಟಕದ ಅಧ್ಯಕ್ಷ ವಿನಾಯಕರೆಡ್ಡಿ ಬುಧೇರಾ, ಪ್ರಮುಖರಾದ ಉದಯಕುಮಾರ ಅಷ್ಟೂರೆ, ಸೋಮಶೇಖರ ಸಜ್ಜನ್, ದತ್ತಾತ್ರಿ ಅಲ್ಲಮಕೇರೆ, ಸತೀಶ್ ಫುಲಾರಿ, ವಿವೇಕ ನಿರ್ಮಳೆ, ನವೀನ್ ಬುಧೇರಾ, ಅಮಿತ್ ಶಿವಪೂಜೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net