

ಬೀದರ್: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡದ ಉಳಿವಿಗೆ ಸಂಘಟಿತ ಪ್ರಯತ್ನ ಅಗತ್ಯವಾಗಿದೆ ಎಂದು ಸಾಹಿತಿ ಭಾರತಿ ವಸ್ತ್ರದ್ ಹೇಳಿದರು.
ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕುವೆಂಪು ಜನ್ಮ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಮಕ್ಕಳ ಕವಿಗೋಷ್ಠಿ ಹಾಗೂ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿ, ಮಾತೃ ಭಾಷೆ ಬೆಳವಣಿಗೆಗೆ ಶ್ರಮಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕುವೆಂಪು ಮನುಜ ಮತ, ವಿಶ್ವ ಪಥ ಸಂದೇಶ ಸಾರಿದ್ದಾರೆ ಎಂದು ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿ ಸಿದ್ದಮ್ಮ ಹಳಕಾಯಿ ಹೇಳಿದರು.
ಕುವೆಂಪು ಸಮಾಜ ಕಟ್ಟುವ ಕೆಲಸ ಮಾಡಿದ್ದರು. ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದರು ಎಂದು ಶಿಕ್ಷಕಿ ಶ್ರೀದೇವಿ ವಿ. ಪಾಟೀಲ ತಿಳಿಸಿದರು.
ವಿದ್ಯಾರ್ಥಿಗಳು ಕಲೆ, ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕಿ ಸುನಿತಾ ಕುಲಕರ್ಣಿ ಹೇಳಿದರು.
ವಿದ್ಯಾರ್ಥಿಗಳು ಸ್ವರಚಿತ ಕವನ ವಾಚಿಸಿದರು. ಕುವೆಂಪು ಕುರಿತು ಭಾವಗೀತೆಗಳನ್ನೂ ಹಾಡಿ ಗಮನ ಸೆಳೆದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಜನಾ, ರೋಹಿಣಿ ಹಾಗೂ ಸ್ವಾತಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ರಂಗೋಲಿ, ಭಾಷಣ, ಪ್ರಬಂಧ, ಶುದ್ಧ ಬರಹ, ಕಲಿಕೋಪಕರಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕರಾದ ಸಂಗೀತಾ, ಸರೋಜಾ, ಸ್ವರೂಪಾರಾಣಿ ಇದ್ದರು. ನಿರ್ಮಲಾ ಪಾಟೀಲ ಸ್ವಾಗತಿಸಿದರು. ಭೀಮರಾವ್ ವಂದಿಸಿದರು.