

ಬೀದರ್: ರೈತರು ಬರಗಾಲ ಬರುವುದನ್ನು ಬಯಸುತ್ತಾರೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ನೀಡಿರುವ ಹೇಳಿಕೆ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿ, ಜವಾಬ್ದಾರಿ ಸ್ಥಾನದಲ್ಲಿ ಇರುವ ಪಾಟೀಲ್ ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ. ಸಿಎಂ ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ಗೌರವ ಇದ್ದರೆ ಸಚಿವ ಸಂಪುಟದಿಂದ ಪಾಟೀಲ್ ಅವರನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.
ಸಾಲಮನ್ನಾ ಬಯಸಿ ರೈತರು ಬರಗಾಲ ಬರಲಿ ಎನ್ನುವುದನ್ನೇ ಕಾಯುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ತಾವೊಬ್ಬ ಜನರ ಸೇವಕ, ರೈತರ ಹಣದಲ್ಲಿ ಜೀವನ ಮಾಡುತ್ತಿರುವುದನ್ನು ಮೊದಲು ತಿಳಿಯಬೇಕು. ರೈತರು ಬರ ಬರಬೇಕು ಎಂದು ಬಯಸುತ್ತಾರಾ? ಬೆಳೆ ಬಾರದಿದ್ದರೂ ಕನಿಷ್ಠ ಜನ, ಜಾನುವಾರುಗಳಿಗೆ ಕುಡಿಯಲು ನೀರಿಗಾಗಿ ಮಳೆ ಬರಲಿ ಎಂದು ಹಾರೈಸುತ್ತಾರೆ. ರೈತರು ಸಚಿವರ ರೀತಿ ಐಷಾರಾಮಿ ಜೀವನ ನಡೆಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಸಚಿವ ಪಾಟೀಲ್ ಅವರು ಹೇಳಿಕೆ ವಾಪಸ್ ಪಡೆದು, ರಾಜ್ಯದ ರೈತರಿಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಪ್ರಮುಖರಾದ ಪ್ರವೀಣ ಕುಲಕರ್ಣಿ, ಪ್ರಕಾಶ ಬಾವಗೆ, ಶಂಕ್ರೆಪ್ಪ ಪಾರಾ, ಮಲ್ಲಿಕಾರ್ಜುನ ಚಕ್ಕಿ, ಬಸಪ್ಪ ಆಲೂರೆ, ರಾಜಕುಮಾರ ಪಾಟೀಲ್, ಸುಮಂತ ಗ್ರಾಮಲೆ, ವಿಶ್ವನಾಥ ಧರಣೆ, ಧೂಳಪ್ಪ ಆಣದೂರ, ಬಸಪ್ಪ ಬಿರಾದಾರ, ನಾಗೇಶ್ವರ ಮರಕಲ್, ಸುರೇಶ ಜನಶೆಟ್ಟಿ, ನಾಗಶೆಟ್ಟಿ ಮರಕಲ್ ಇತರರಿದ್ದರು.