

ಬಸವಕಲ್ಯಾಣ: ಶ್ರೀರಾಮ ಆದರ್ಶ ಪುರುಷ, ತ್ಯಾಗದ ಸಂಕೇತ. ದಶಕಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ರಾಮನ ಮಂದಿರ ಲೋಕಾರ್ಪಣೆ ಆಗುತ್ತಿರುವುದು ಪ್ರತಿಯೊಬ್ಬ ಹಿಂದುವಿಗೆ ಹೆಮ್ಮೆಯ ವಿಷಯ. ಇದು ರಾಷ್ಟ್ರ ನಿರ್ಮಾಣದ ಕಾರ್ಯ ಎಂದು ಮೆಹಕರ್-ತಡೋಳಾ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯ ಹೇಳಿದರು.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವಹಿಂದು ಪರಿಷತ್ನಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಶ್ರೀರಾಮ ಮಂದಿರ ಅಕ್ಷತಾ ಕಲಶದ ಶೋಭಾ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀರಾಮನ ಮನಸ್ಥಿತಿ ಇಂದಿನ ರಾಜಕೀಯ ನಾಯಕರಿಗೆ ಬಂದರೆ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಶಿಕ್ಷಣದಲ್ಲಿ ನೀತಿ, ಶಾಸನದಲ್ಲಿ ಭೀತಿ, ಜೀವನದಲ್ಲಿ ಮಿತಿ, ಸ್ವಾತಂತ್ರ್ಯಕ್ಕೂ ಒಂದು ಸೀಮೆ ಇದ್ದಾಗ ರಾಷ್ಟ್ರ ಪ್ರಗತಿಗೆ ಸಹಕಾರಿಯಾಗುವ ಮೂಲಕ ರಾಮರಾಜ್ಯ ನಿಮಾರ್ಣಕ್ಕೆ ನಾಂದಿಯಾಗುತ್ತದೆ. ರಾಮ ರಾಜ್ಯ ನಿರ್ಮಾಣ ಕನಸು ಸಾಕಾರವಾಗುತ್ತದೆ ಎಂದರು.
ಅಭಿಯಾನದ ಜಿಲ್ಲಾ ಸಹ ಸಂಯೋಜಕ ಸಂದೀಪ ತೇಲಗಾಂವಕರ್ ಮಾತನಾಡಿ, ಜಿಲ್ಲೆಯ ಎಲ್ಲ ಹಿಂದುಗಳ ಮನೆ-ಮನೆಗೆ ತೆರಳಿ ಅಕ್ಷತೆ ಜತೆಗೆ ಶ್ರೀರಾಮನ ಭಾವಚಿತ್ರ ಮತ್ತು ಕರಪತ್ರ ವಿತರಿಸಿ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ವಿಷಯ ತಿಳಿಸಲಾಗುವುದು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗುವುದು ಎಂದು ಹೇಳಿದರು.
ಜ.22ರಂದು ಶ್ರೀರಾಮ ನವಮಿಯಂತೆ ಭಕ್ತಿ-ಶೃದ್ದೆಯಿಂದ ಹಬ್ಬವನ್ನಾಗಿ ಆಚರಿಸಬೇಕು. ದೀಪಾವಳಿಯಂತೆ ಸಂಭ್ರಮದಿಂದ ಉತ್ಸವ ಆಚರಿಸಿಸಬೇಕು. ವಿಶೇಷ ಪೂಜೆ ಸಲ್ಲಿಸಿ ಅಕ್ಷತೆಯನ್ನು ಮುಡಿಪು ಹಾಕಿಟ್ಟು ಮುಂದೆ ಆಯೋಧ್ಯೆಗೆ ಬರುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಪೂಜ್ಯ ಜಯಶಾಂತಲಿಂಗ ಸ್ವಾಮೀಜಿ ಹಿರನಾಗಾಂವ, ಗವಿಮಠ ಸಂಸ್ಥಾನದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ರಾಜೇಶ್ವರನ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ, ಗಡಿಗೌಂಡಗಾಂವನ ಶ್ರೀ ಶಾಂತವೀರ ಶಿವಾಚಾರ್ಯ, ಹುಡಗಿಯ ಶ್ರೀ ಚನ್ನಮಲ್ಲ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆರ್ ಎಸ್ ಎಸ್ ಜಿಲ್ಲಾ ಕಾರ್ಯವಾಹ ಭಾರ್ಗವಚಾರಿ, ವಿಎಚ್ಪಿ ತಾಲೂಕು ಅಧ್ಯಕ್ಷ ಶ್ರೀಶೈಲ ವಾತಡೆ ಇತರರಿದ್ದರು. ಬಜರಂಗ ದಳದ ತಾಲೂಕು ಸಂಯೋಜಕ ರವಿ ನಾವದ್ಗೀಕರ್ ನಿರೂಪಣೆ ಮಾಡಿ, ವಂದಿಸಿದರು.
ಭವ್ಯ ಶೋಭಾ ಯಾತ್ರೆ
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಲ್ಲಿಂದ ತರಲಾಗಿದ್ದ ಅಕ್ಷತೆಗೆ ಗುರುವಾರ ನಗರದಲ್ಲಿ ಅಕ್ಷತಾ ಕಲಶದ ಭವ್ಯ ಶೋಭಾ ಯಾತ್ರೆ ಜರುಗಿತು. ನಗರದ ಕಾಳಿ ಗಲ್ಲಿಯ ಶ್ರೀ ಬಾಲಾಜಿ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರ ನಗರದ ಮುಖ್ಯ ರಸ್ತೆ ಮಾರ್ಗವಾಗಿ ಶೋಭಾ ಯಾತ್ರೆ ನಡೆಯಿತು. ಶ್ರೀರಾಮ ಘೋಷಣೆಗಳು ಮೊಳಗಿದವು. ನಂತರ ಶ್ರೀ ಸದಾನಂದ ಸ್ವಾಮಿ ಮಠದ ಪರಿಸರದಲ್ಲಿ ವೇದಿಕೆ ಕಾರ್ಯಕ್ರಮ ಜರುಗಿತು. ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಗವಿಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಅಭಿಯಾನದ ತಾಲೂಕು ಪ್ರಭಾರಿ ವಿನಾಯಕ ಮಂಡಾ, ಶ್ರೀಶೈಲ ವಾತಡೆ, ರವಿ ನಾವದ್ಗೀಕರ್, ಪ್ರಮುಖರಾದ ಅಶೋಕ ವಕಾರೆ, ರವಿ ಚಂದನಕೆರೆ, ವಿಜಯಕುಮಾರ ಮಂಠಾಳೆ, ಸೂರ್ಯಕಾಂತ ಚಿಲ್ಲಾಬಟ್ಟೆ, ಕೃಷ್ಣಾ ಗೋಣೆ, ಅರವಿಂದ ಮುತ್ತೆ, ರಮೇಶ ಧಬಾಲೆ, ಶಿವಕುಮಾರ ಖರುಣೆ, ರವಿ ಸಕಟ್, ಕಮಲಜೀತ್ ಚವ್ಹಾಣ್, ಸಚಿನ್ ಗರುಡಕರ್, ವಿನೋದ ಬಡಗೇಕರ್, ಶ್ರೀಧರ ಮುತ್ತೆ, ಸಚಿನ್ ಸೂರ್ಯವಂಶಿ, ಸಂದೀಪ ಜೋಜನಾ, ನಾಗರಾಜ ಭಂಡಾರಿ ಇತರರಿದ್ದರು.