

ಚಿಟಗುಪ್ಪ: ಸಾವಯವ ಕೃಷಿ ಪದ್ಧತಿಯಿಂದ ಬೆಳೆದ ಆಹಾರ ಪದಾರ್ಥಗಳಿಂದ ಮಾತ್ರ ರೋಗ ನಿರೋಧಕ ಶಕ್ತಿ ಸಿಗಲು ಸಾಧ್ಯ ಎಂದು ಸಾವಯವ ಕೃಷಿ ಪರಿವಾರದ ರಾಜ್ಯ ನಿರ್ದೇಶಕ ಸತೀಶ್ ನನ್ನೂರೆ ಹೇಳಿದರು.
ತಾಲೂಕಿನ ಬನ್ನಳ್ಳಿ ಗ್ರಾಮದ ಪ್ರಗತಿಪರ ರೈತ ಹಣಮಂತರಾವ ಪಾಟೀಲ್ ಹೊಲದಲ್ಲಿ ಶ್ರೀ ವೀರಭದ್ರೇಶ್ವರ ಸಾವಯವ ಕೃಷಿ ಪರಿವಾರದ ವತಿಯಿಂದ ಆಯೋಜಿಸಿದ್ದ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ರೈತರು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ರಾಸಾಯನಿಕ ಗೊಬ್ಬರ ಬಳಕೆಯಿಂದ ಬೆಳೆಯುವ ಆಹಾರ ಪದಾರ್ಥಗಳ ಸೇವನೆಯಿಂದ ಕ್ಯಾನ್ಸರ್ ಹಾಗೂ ಇತರ ಮಾರಕ ರೋಗಗಳು ಕಾಡತೊಡಗಿವೆ. ಹೆಚ್ಚಿನ ಇಳುವರಿ, ಶೀಘ್ರ ಬೆಳವಣಿಗೆ ಸಲುವಾಗಿ ರಾಸಾಯನಿಕ ಗೊಬ್ಬರ ಹಾಗೂ ಔಷಧಗಳ ಬಳಕೆಯಿಂದ ಮಣ್ಣು ತನ್ನ ಪೋಷಕಾಂಶ ಕಳೆದುಕೊಳ್ಳುತ್ತಿದೆ. ಸಾವಯವ ಕೃಷಿಯು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅಗ್ಗದ ಕೃಷಿ ತಂತ್ರಜ್ಞಾನವಾಗಿದೆ. ಈ ಕೃಷಿಗೆ ಕೀಟನಾಶಕಗಳು, ರಾಸಾಯನಿಕ ಗೊಬ್ಬರ ಅಗತ್ಯವಿಲ್ಲ ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾವಯವ ಕೃಷಿಕ ಗುರುಲಿಂಗಪ್ಪ ಮೇಲದೊಡ್ಡಿ ಮಾತನಾಡಿ, ರಾಸಾಯನಿಕ ಕೃಷಿಗೆ ಹೋಲಿಸಿದರೆ ಸಾವಯವ ಆರೋಗ್ಯಕರ ಮತ್ತು ರುಚಿಯಾದ ಆಹಾರವನ್ನು ನೀಡುತ್ತದೆ. ಹೀಗಾಗಿ ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಹೇಳಿದರು.
ಸಾವಯವ ಕೃಷಿ ಪರಿವಾರದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಜವಾದಿ, ನಿರ್ದೇಶಕ ಸಿದ್ದಣ್ಣ ಬೂಶೆಟ್ಟಿ ಮಾತನಾಡಿದರು. ಕೃಷಿ ಪರಿವಾರದ ತಾಲೂಕು
ಅಧ್ಯಕ್ಷತೆ ವಹಿಸಿದ್ದ ಕೃಷಿ ಪರಿವಾರದ ತಾಲೂಕು ಅಧ್ಯಕ್ಷ ಅಧ್ಯಕ್ಷ ಹಣಮಂತರಾವ ಪಾಟೀಲ್ ಮಾತನಾಡಿ, ವಿಷಮುಕ್ತ ಆಹಾರ ಕೊಡಬೇಕಾಗಿರುವುದು ಪ್ರತಿ ರೈತನ ಆದ್ಯ ಕರ್ತವ್ಯ. ಆದರೆ ಅವನನ್ನು ರಾಸಾಯನಿಕ ಗೊಬ್ಬರ, ಔಷಧಗಳು ಮುಂದಕ್ಕೆ ಬಿಡುತ್ತಿಲ್ಲ. ರಾಸಾಯನಿಕ ಹಾಕಿ ಕಾಯಿಯನ್ನು ಹಣ್ಣು ಮಾಡಿ ತಿನ್ನುವುದು ನಾನಾ ರೋಗ ಸೃಷ್ಟಿಗೆ ಕಾರಣವಾಗುತ್ತಿದೆ. ಸದ್ಯ ಇದರ ತಡೆಗೆ ಹೋರಾಟ ನಡೆಯಬೇಕಿದೆ. ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರೈತರಾದ ಶಿವಕುಮಾರ ಹುಣಚಗೇರಾ, ರಾಮರಾವ ಕುಲಕರ್ಣಿ, ಕಾಶಿನಾಥ ಚಿಕ್ಕಪಾಟೀಲ್, ರವಿ ನಿಂಗಣ್ಣಿ,ಅಜೀತ್ ಪಾಟೀಲ್, ಕಾಶಿನಾಥ ಸಲಗರ, ಮಂಜುನಾಥ, ಬಸವರಾಜ ಬಿದಿ ಇತರರಿದ್ದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಪ್ರಕಾಶ ಕೋರಿ ಬೆಳಕೇರಾ, ಗೋಪಾಲರಡ್ಡಿ ಕೊಡಂಬಲ, ಮಲ್ಲಿಕಾರ್ಜುನ ಭುರನಾಪುರ ಕೊಡಂಬಲ, ಶಿವಕುಮಾರ ಹಲಬರ್ಗಾ ನೀರ್ಣಾ ವಾಡಿ, ರಾಮರಡ್ಡಿ ಚೌಲಾ ಬನ್ನಳ್ಳಿ ಅವರನ್ನು ಸನ್ಮಾನಿಸಲಾಯಿತು.