ಪ್ರಧಾನಮಂತ್ರಿಯಾಗಲಿದ್ದಾರೆ ಖರ್ಗೆಜಿ

28hbd4
Published on

ಹುಮನಾಬಾದ್: ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆಜಿ ಅವರು ಪ್ರಧಾನಿಯಾಗುವುದು ಪಕ್ಕಾ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಗೃಹ ಕಚೇರಿಯಲ್ಲಿ ಗುರುವಾರ 139ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಆಡಳಿತ ನಡೆಸಲಿದ್ದು, ಖರ್ಗೆ ಅವರೇ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಪಕ್ಷದ ಮುಖಂಡರು, ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು ಸಂಘಟನೆಗೆ ಶ್ರಮಿಸಬೇಕು. ಕಾಂಗ್ರೆಸ್ ದೇಶದ ಸ್ವಾತಂತ್ರ್ಯ ಸಂಗ್ರಾಮದಿಂದ ಈವರೆಗೆ ದೇಶ ಮೊದಲು ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಬಿಜೆಪಿಯ ದುರಾಡಳಿತ ಬೇಸತ್ತು ರಾಜ್ಯದ ಜನತೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪೂರ್ಣಬಹುಮತದೊಂದಿಗೆ ಅಧಿಕಾರ ನೀಡಿದರು. ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿಯೊಬ್ಬರ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸುತ್ತಿದೆ. ರಾಜ್ಯ ಸರ್ಕಾರ ಯೋಜನೆಗಳನ್ನು ಜನರಿಗೆ ತಲುಪಿಸಿ ಪಕ್ಷದ ಸಂಘಟನೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಅವಧಿಯಲ್ಲಿ ದೇಶ ಹಾಗೂ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ನಡೆದಿವೆ. ರಾಜ್ಯದಲ್ಲಿ ಪಕ್ಷ ನುಡಿದಂತೆ ನಡೆಯುತ್ತಿದೆ. ಸೋಲು-ಗೆಲವು ಸಮನಾಗಿ ಸ್ವೀಕರಿಸಿದ್ದೇವೆ. ಲೋಕಸಭೆಯಲ್ಲಿ ಟಿಕೆಟ್ ಯಾರಿಗೆ ಸಿಕ್ಕರೂ ಎಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯಾರ್ಥಿಯನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಹೇಳಿದರು.
ನಗರ ಘಟಕ ಅಧ್ಯಕ್ಷ ಅಫ್ಸರ್ಮಿಯ್ಯಾ ಮಾತನಾಡಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ ಅಭೀಷೇಕ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಓಂಕಾರ ತುಂಬಾ, ಜಿಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ, ಪ್ರಮುಖರಾದ ಕಂಠೆಪ್ಪ ದಾನಾ, ಮಲ್ಲಿಕಾರ್ಜುನ ಮಹೇಂದ್ರಕರ್, ಮಹೇಶ ಅಗಡಿ, ಬಾಬುರಾವ ಪರಮಶೆಟ್ಟಿ, ಸುಮಿತ್ರಾ ಪರೀಟ್, ವೀರಪ್ಪ ಭುತಾಳೆ, ಧರಂರಡ್ಡಿ, ಬಸ್ಸು ಶೇರಿಕಾರ, ಸಚಿನ್ ದಾಡಗೆ, ಸುರೇಶ ಘಾಂಗ್ರೆ, ಅಜಂ, ಸಂತೋಷ, ರವಿಚಂದ್ರ ಸಂಗಮ, ರಂಜಿತ ಮಾನಕರೆ, ಜ್ಞಾನೇಶ್ವರ ಭೋಸ್ಲೆ, ರಾಹುಲ್ ಖಿಲ್ಜಿ, ನರಸಪ್ಪ ಪರಸನೋರ್, ವಿಜಯಕುಮಾರ ಪವಾರ್ ಇತರರಿದ್ದರು.

ಚಿಂತನ-ಮಂಥನ ಸಭೆ ಜ.9ಕ್ಕೆ
ಮುಂಬರುವ ಲೋಕಸಭಾ, ಜಿಪಂ, ತಾಪಂ ಚುನಾವಣೆಯ ಎದುರಿಸಲು ಕಾಂಗ್ರೆಸ್ ಪಕ್ಷದ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಚಿಂತನ-ಮಂಥನ ಸಭೆ ಜ.9ರಂದು ಬೆಳಗ್ಗೆ 11ಕ್ಕೆ ಪಟ್ಟಣದ ಶಕುಂತಲಾ ಪಾಟೀಲ್ ಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು. ಲೋಕಸಭೆಗೂ ಮುನ್ನವೇ ಜಿಪಂ, ತಾಪಂ ಚುನಾವಣೆ ಬರಲಿದೆ. ಈ ಬಾರಿ ಕ್ಷೇತ್ರದ ಎಲ್ಲ ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಸುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆ ಶುರು ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ಸಭೆ ಕರೆಯಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net