

ಬೀದರ್: ಮಾದಿಗರ ಒಳ ಮೀಸಲಾತಿ ಸಂಬಂಧ ಸರ್ವೋಚ್ಛ ನ್ಯಾಯಾಲಯದ 7 ನ್ಯಾಯಮೂರ್ತಿಗಳ ಪೀಠದಲ್ಲಿ ಬರುವ ಜನವರಿ 17ಕ್ಕೆ ವಿಚಾರಣೆ ನಡೆಯಲಿದೆ. ಮಾದಿಗರ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಹೇಳಿದರು.
ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ರಾಜ್ಯದ ಎಲ್ಲೆಡೆ-ಮಾದಿಗ ಮುನ್ನಡೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಯಾದರೆ ಮಾದಿಗ ಸಮಾಜದ ಅಭಿವೃದ್ಧಿಗೆ ಹೊಸ ಆಯಾಮ ಸಿಗಲಿದೆ. ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ, ಉನ್ನತ ಶಿಕ್ಷಣ ಕೊಡಿಸಬೇಕು. ಇದರಿಂದ ಸಮಗ್ರ ವಿಕಾಸ ಸಾಧ್ಯ ಎಂದರು.
ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ ಮಾತನಾಡಿ, ಮಾದಿಗರ 35 ವರ್ಷಗಳ ಹೋರಾಟದ ಫಲವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಒಳ ಮೀಸಲಾತಿಗಾಗಿ ಸಮಿತಿಯನ್ನು ರಚನೆ ಮಾಡಿದ್ದಾರೆ. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಬರುವ ದಿನಗಳು ದೂರವಿಲ್ಲ ಎಂದು ಹೇಳಿದರು.
ಪ್ರಮುಖರಾದ ರಾಜು ಕಡ್ಯಾಳ, ದೇವೇಂದ್ರನಾಥ ನಾದ, ವೆಂಕಟೇಶ ದೊಡ್ಡೇರಿ, ಸಂಪತ್, ರವಿಚಂದ್ರ ಕ್ರಾಂತಿಕರ್, ಮಂಜುನಾಥ, ವಿಜಯಕುಮಾರ ಹಿಪ್ಪಳಗಾಂವ, ಪೀಟರ್ ಚಿಟಗುಪ್ಪ ಇತರರಿದ್ದರು. ದಯಾನಂದ ವಕೀಲ ಸ್ವಾಗತಿಸಿದರು. ಪ್ರವೀಣ ಮೀರಾಗಂಜಕರ್ ನಿರೂಪಣೆ ಮಾಡಿದರು. ಸುಧಾಕರ ಸೂರ್ಯವಂಶಿ ವಂದಿಸಿದರು.