ರೂ. 48 ಕೋಟಿಯಲ್ಲಿ ಮೇಲ್ಸೇತುವೆ

Dr Siddu Patil
Published on

ಹುಮನಾಬಾದ್: ಇಲ್ಲಿನ ಚಿದ್ರಿ ಬೈಪಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ 48 ಕೋಟಿ ರೂ. ಅನುದಾನದಡಿ ಮೇಲ್ಸೇತುವೆ (ಫ್ಲೈಓವರ್) ನಿರ್ಮಾಣಕ್ಕೆ ಕೇಂದ್ರದ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಜೂರಿ ನೀಡಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ತಿಳಿಸಿದ್ದಾರೆ.
ಚಿದ್ರಿ ಬೈಪಾಸ್ನಲ್ಲಿ ಅವೈಜ್ಞಾನಿಕ ಹೆದ್ದಾರಿ ನಿರ್ಮಿಸಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು. ಇಲ್ಲಿ ನಿತ್ಯ ರಸ್ತೆ ಅಪಘಾತಗಳು ಸಂಭವಿಸಿ ಸಾವು- ನೋವುಗಳ ಸಂಖ್ಯೆ ಹೆಚ್ಚಿದೆ. ಈ ಸಂಬಂಧ ಕೇಂದ್ರ ಸಚಿವ ಭಗವಂತ ಖೂಬಾ ಕಳೆದ ವರ್ಷ ಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದಾಗ ಮೇಲ್ಸೇತುವೆ ನಿರ್ಮಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಅಧಿಕಾರಿಗಳು ಎಲ್ಲ ವರದಿಗಳನ್ನು ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ಸಲ್ಲಿಸಿದರು. ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಇದೀಗ ಕೇಂದ್ರ ಮಂಜೂರಿ ನೀಡಿದೆ ಎಂದು ಹೇಳಿದ್ದಾರೆ.
ನಾನು ಶಾಸಕನಾದ ಮೊದಲ ದಿನವೇ ಈ ವಿಷಯ ಕೇಂದ್ರ ಸಚಿವ ಖೂಬಾ ಗಮನಕ್ಕೆ ತಂದು ಅಪಘಾತಗಳ ನಿಯಂತ್ರಣಕ್ಕೆ ಫ್ಲೈ ಓವರ್ ನಿರ್ಮಿಸುವಂತೆ ಒತ್ತಾಯಿಸಿದ್ದೆ, ಅದರ ಪ್ರತಿಫಲವಾಗಿ ಇದೀಗ ಮಂಜೂರಿ ಸಿಕ್ಕಿದ್ದು ಖುಷಿ ತಂದಿದೆ. ಕೆಲದಿನ ಹಿಂದಷ್ಟೇ ಬೀದರ್-ಯಶವಂತಪುರ ವಾಯಾ ಹುಮನಾಬಾದ್ ಹೊಸ ರೈಲು ಪ್ರಾರಂಭವಾಗಿದೆ. ಇದರೊಂದಿಗೆ ತಿರುಪತಿ, ಮುಂಬೈಗೂ ವಿಶೇಷ ರೈಲುಗಳು ಚಲಿಸುತ್ತಿವೆ. ಇದೀಗ ಹೊಸ ಫ್ಲೈಓವರ್ ಮಂಜೂರಾಗಿದ್ದು, ನರೇಂದ್ರ ಮೋದಿ ಸರ್ಕಾರಕ್ಕೆ ಕ್ಷೇತ್ರದ ಜನತೆ ಪರವಾಗಿ ಅಭಿನಂದಿಸುವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net