ವಿಜಯೇಂದ್ರ ಟೀಮ್ ಸೇರಿದ ಬೆಲ್ದಾಳೆ

Dr Sailendra beldale
Published on

ಬೀದರ್: ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ತಂಡದಲ್ಲಿ ನಿರೀಕ್ಷೆಯಂತೆ ಬೀದರ್ ಜಿಲ್ಲೆಯಿಂದ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರಿಗೆ ಸ್ಥಾನ ಸಿಕ್ಕಿದೆ.
ಪಕ್ಷದ ರಾಜ್ಯ ಪದಾಧಿಕಾರಿಗಳ ಪಟ್ಟಿ ಶನಿವಾರ ರಾತ್ರಿ ಬಿಡುಗಡೆಯಾಗಿದ್ದು, ಶಾಸಕ ಬೆಲ್ದಾಳೆೆಗೆ ರಾಜ್ಯ ಕಾರ್ಯದರ್ಶಿ ಸ್ಥಾನ ಒಲಿದಿದೆ. ವಿಜಯೇಂದ್ರ ಅವರ ಟೀಮ್ ನಲ್ಲಿ ಜಿಲ್ಲೆಯಿಂದ ಇವರೊಬ್ಬರಿಗೆ ಮಾತ್ರ ಅವಕಾಶ ದೊರಕಿದೆ. ಶೈಲೇಂದ್ರ ಬೆಲ್ದಾಳೆ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ವಿಜಯೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಪಕ್ಷದ ರಾಜ್ಯ ಮಟ್ಟದೊಳಗೆ ಇದೀಗ ಬಡ್ತಿ ಹೊಂದಿರುವುದು ವಿಶೇಷ.
ಕಳೆದ ಎರಡು ದಶಕಗಳಿಂದ ಬೆಲ್ದಾಳೆ ಬಿಜೆಪಿಯಲ್ಲಿ ಸಕ್ರಿಯರಿದ್ದಾರೆ. ಒಮ್ಮೆ ಜಿಪಂ ಸದಸ್ಯರಾಗಿದ್ದರು. ಒಂದು ಅವಧಿಗೆ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ, ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ 2013, 2018 ರಲ್ಲಿ ಸೋತಿದ್ದ ಬೆಲ್ದಾಳೆ, 2023ರಲ್ಲಿ ಗೆದ್ದು ಮೊದಲ ಬಾರಿ ವಿಧಾನಸಭೆ ಎಂಟ್ರಿ ಕೊಟ್ಟಿದ್ದಾರೆ. ಪಕ್ಷದ ಸಂಘಟನೆಯ ಸೇವೆ ಪರಿಗಣಿಸಿ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಇವರ ಈ ನೇಮಕ ಜಿಲ್ಲೆ ವಿಶೇಷವಾಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಜೋಶ್ ಹೆಚ್ಚಿಸಿದೆ.
ಪಕ್ಷದ ವರಿಷ್ಠರು ನೀಡಿದ ಹುದ್ದೆಯು ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ. ಬರುವ ಲೋಕಸಭೆ ಸೇರಿ ಎಲ್ಲ ಚುನಾವಣೆಗಳಲ್ಲಿ ಪಕ್ಷಕ್ಕೆ ಭರ್ಜರಿ ಜಯ ತಂದುಕೊಡುವುದೇ ನಮ್ಮ ಧ್ಯೇಯ. ವಿಜಯೇಂದ್ರ ಅವರ ಸಾರಥ್ಯದಲ್ಲಿ ಬಿಜೆಪಿ ಬರುವ ದಿನಗಳಲ್ಲಿ ಹೊಸ ದಾಖಲೆ ಮಾಡುವುದು ಖಚಿತ ಎಂದು ಬೆಲ್ದಾಳೆ ವಿಜಯವಾಣಿ ಜತೆಗೆ ಮಾತನಾಡಿ ಸಂತಸ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net