

ಹುಮನಾಬಾದ್: ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ನಡುವೆ ವಾದ-ಪ್ರತಿವಾದ ಮುಂದುವರಿದಿದ್ದು, ಶುಕ್ರವಾರ ಮತ್ತೆ ಇಬ್ಬರೂ ವಾಗ್ವಾದ ನಡೆಸಿದ್ದಾರೆ.
ದುಬಲಗುಂಡಿಯಲ್ಲಿ ಜೆಜೆಎಂ ಕಾಮಗಾರಿ ಚಾಲನೆ ಸಮಾರಂಭದಲ್ಲಿ ಶಿಷ್ಟಾಚಾರಕ್ಕೆ(ಪ್ರೋಟೋಕಾಲ್) ಸಂಬಂಧಿಸಿದಂತೆ ಎಂಎಲ್ಎ ಮತ್ತು ಎಂಎಲ್ಸಿ ಮಧ್ಯೆ ಕೆಲಕಾಲ ತೀವ್ರ ವಾಗ್ವಾದ ಮತ್ತು ಮಾತಿನ ಚಕಮಕಿ ನಡೆಯಿತು. ಇದು ಕಾರ್ಯಕ್ರಮದಲ್ಲಿ ಒಂದಿಷ್ಟು ಗೊಂದಲ, ಗದ್ದಲಮಯ ವಾತಾವರಣಕ್ಕೆ ಕಾರಣವಾಯಿತು.
ಉದ್ಘಾಟಕರಾಗಿದ್ದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಅತಿಥಿಯಾಗಿದ್ದ ಎಂಎಲ್ಸಿ ಭೀಮರಾವ ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಭೋಜಗುಂಡಿ, ಉಪಾಧ್ಯಕ್ಷ, ಸದಸ್ಯರು ಆಗಮಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ವೇದಿಕೆಯಲ್ಲಿ ಅಳವಡಿಸಿದ ಬ್ಯಾನರ್ ನಲ್ಲಿ ಶಾಸಕರ ಫೋಟೋ ಹಾಕಲಾಗಿತ್ತು. ಆದರೆ ಎಂಎಲ್ಸಿ, ಗ್ರಾಪಂ ಅಧ್ಯಕ್ಷರ ಫೋಟೋ ಹಾಕದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಭೀಮರಾವ ಪಾಟೀಲ್, ಗ್ರಾಪಂ ಅಧ್ಯಕ್ಷ ಇತರ ಸದಸ್ಯರು ಅಧಿಕಾರಿಯನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
ಬ್ಯಾನರ್ ನಲ್ಲಿನ ಫೋಟೋ ಪರಸ್ಪರರ ನಡುವಿನ ಮಾತಿನ ಸಮರಕ್ಕೆ ಕಾರಣವಾಯಿತು. ಭೀಮರಾವ ಪಾಟೀಲ್ ಪ್ರಶ್ನಿಸಿದ್ದಕ್ಕೆ ಸಿದ್ಧಲಿಂಗಪ್ಪ ಪಾಟೀಲ್ ಆಕ್ಷೇಪ ಎತ್ತಿದರು. ಇದು ಇಬ್ಬರ ನಡುವೆ ವಾಗ್ವಾದಕ್ಕೆ ನಾಂದಿ ಹಾಡಿತು. ಮೊದಲು ಕಾರ್ಯಕ್ರಮಕ್ಕೆ ಚಾಲನೆ ನೀಡೋಣ, ಆ ಮೇಲೆ ಈ ವಿಷಯದ ಬಗ್ಗೆ ಚರ್ಚಿಸೋಣ ಎಂದು ಅಲ್ಲಿದ್ದವರು ಹೇಳುತ್ತಿದ್ದಂತೆ ಶಾಸಕ ಸಿದ್ದಲಿಂಗಪ್ಪ ಭೂಮಿಪೂಜೆ ಸ್ಥಳಕ್ಕೆ ಆಗಮಿಸಿ ಉದ್ಘಾಟಿಸಿದರು. ಎಂಎಲ್ಸಿ ಇತರರು ಪಾಲ್ಗೊಂಡರು.
ನಂತರ ವೇದಿಕೆಗೆ ಆಗಮಿಸಿದ ಭೀಮರಾವ ಪಾಟೀಲ್, ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾಗಿದೆ. ವೇದಿಕೆ ಸಮಾರಂಭದ ಬ್ಯಾನರ್ ನಲ್ಲಿ ಶಿಷ್ಟಾಚಾರ ಪ್ರಕಾರ ಶಾಸಕರ ಫೋಟೋ ಇರಬಹುದು ಎಂದಾದರೆ ನೀವೇ ಕಾರ್ಯಕ್ರಮ ಮಾಡಿಕೊಳ್ಳಿ. ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಸ್ಪಷ್ಟನೆ ನೀಡಿ ಕಾರ್ಯಕ್ರಮ ನಡೆಸಿ ಎಂದು ಅಧಿಕಾರಿಗಳಿಗೆ ಹೇಳಿದರು.
ಶಿಷ್ಟಾಚಾರದ ಪ್ರಕಾರವೇ ಫೋಟೋ ಹಾಕಲಾಗಿದೆ ಎಂದು ಅವರಿಗೆ ಹೇಳಿ ಎಂದು ಶಾಸಕ ಡಾ.ಸಿದ್ಧಲಿಂಗಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು. ಆಗ ಮಾತಿನ ಚಕಮಕಿ ಜೋರಾಯಿತು. ಇದೇ ವೇಳೆ ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್ ಸಹ ವೇದಿಕೆಗೆ ಆಗಮಿಸಿದಾಗ ವಾಗ್ವಾದ ಮತ್ತಷ್ಟು ತೀವ್ರಗೊಂಡಿತು. ಎರಡೂ ಕಡೆಯವರ ಬೆಂಬಲಿಗರು ಜಮಾಯಿಸಿದರು. ಸಮಾಧಾನಪಡಿಸಲು ಪೊಲೀಸರು ಹರಸಾಹಸ ಪಟ್ಟರು. ಕಿರಿಕಿರಿ ಮಧ್ಯೆ ವಿಧಾನ ಪರಿಷತ್ ಸದಸ್ಯರು, ಗ್ರಾಪಂ ಅಧ್ಯಕ್ಷ, ಸದಸ್ಯರು ಕಾರ್ಯಕ್ರಮ ಬಹಿಷ್ಕರಿಸಿ ಹೋದರು.
ಈ ಬೆಳವಣಿಗೆ ಕೆಲಕಾಲ ಬಿಗುವಿನ ವಾತಾವರಣ ನಿರ್ಮಿಸಿತ್ತು. ನಂತರ ಶಾಸಕರು ಸಮಾರಂಭದಲ್ಲಿ ಮಾತನಾಡಿದರು. ಸ್ಥಳದಲ್ಲಿ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ, ಸಿಪಿಐ ಗುರು ಪಾಟೀಲ್ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಅವಾಚ್ಯ ಪದಗಳ ಬಳಕೆ
ಬಿಜೆಪಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮತ್ತು ಕಾಂಗ್ರೆಸ್ ಎಂಎಲ್ಸಿ ಭೀಮರಾವ ಪಾಟೀಲ್ ಮಾತಿನ ಸಮರದಲ್ಲಿ ನಾಲಿಗೆ ಮೇಲೆ ನಿಯಂತ್ರಣ ಕಳೆದುಕೊಂಡು ಅವಾಚ್ಯ ಪದಗಳನ್ನು ಬಳಸಿದರು. ಒಂದು ಹಂತದಲ್ಲಿ ಪರಸ್ಪರರು ಏಕವಚನ ಪದಗಳ ಪ್ರಯೋಗ ಜತೆಗೆ ಒಂದು ಕೈ ನೋಡೋಣ ಎಂದರು. ಬಾನೋ ಎಂದು ಇಬ್ಬರೂ ತೊಡೆ ತಟ್ಟಿ ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದರು. ಇದು ವಾತಾವರಣ ಬಿಗಡಾಯಿಸಿ ಸಮಾರಂಭವನ್ನು ರಣಾಂಗಣ ಸ್ಥಿತಿಗೆ ತಂದು ನಿಲ್ಲಿಸಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಎರಡೂ ಕಡೆಯವರು ಇಬ್ಬರಿಗೂ ಒತ್ತಿ ಹಿಡಿದು ದೂರ ಮಾಡುವ ಪ್ರಯತ್ನದಲ್ಲಿ ಸಫಲರಾದರು. ಇಬ್ಬರ ನಡುವೆ ಹೊಡೆದಾಡುವ ಮಟ್ಟಿಗೆ ಕಿರಿಕಿರಿ ನಡೆಯುತ್ತಿದ್ದರೂ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಅಷ್ಟೊಂದು ಗಂಭೀರ ಪ್ರಯತ್ನ ಮಾಡದಿರುವುದು ಸ್ಥಳೀಯರ ಟೀಕೆ ಜತೆಗೆ ಚರ್ಚೆಗೂ ಕಾರಣವಾಯಿತು. ಮುಂದಿನ ದಿನಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಕ್ಕೂ ಇದು ಸ್ಪಷ್ಟ ಸೂಚನೆ ನೀಡಿತು. ಇಲ್ಲಿ ನಡೆದ ಪರಸ್ಪರರ ವಾಗ್ವಾದ, ಅವಾಚ್ಯ ಪದ ಬಳಕೆ, ಕೈಕೈ ಮಿಲಾಯಿಸುವ ಹಂತದ ಬೆಳವಣಿಗೆಯ ವಿಡಿಯೋ ಫುಲ್ ವೈರಲ್ ಆಗಿವೆ.