

ಬೀದರ್: ಭಾರತೀಯ ಇತಿಹಾಸ ಸಂಕಲನ ಸಮಿತಿ ಜಿಲ್ಲಾ ಘಟಕದಿಂದ ಡಿ.23, 24ರಂದು ಪ್ರತಾಪನಗರದ ಜನಸೇವಾ ಶಾಲೆಯಲ್ಲಿ ಸ್ವ ಇತಿಹಾಸ, ಸ್ವ ಸಂಸ್ಕೃತಿ ಮತ್ತು ಸ್ವ ಶಿಕ್ಷಣ ಕುರಿತು ಎರಡು ದಿನದ ಕಾರ್ಯಾಗಾರ ಮತ್ತು ಅಭ್ಯಾಸ ವರ್ಗ ಆಯೋಜಿಸಲಾಗಿದೆ ಎಂದು ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಡಾ.ಶಿವಕುಮಾರ ಉಪ್ಪೆ ಹೇಳಿದ್ದಾರೆ.
ಡಿ.23ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನಾ ಸಂಘಟನಾ ಕಾರ್ಯದರ್ಶಿ ಡಾ.ಬಾಲಮುಕುಂದ ಪಾಂಡೇಯ ಉದ್ಘಾಟಿಸುವರು. ಸಮಿತಿ ರಾಜ್ಯ ಗೌರವಾಧ್ಯಕ್ಷ ಡಾ.ಸಂಜೀವರಡ್ಡಿ, ಪ್ರಮುಖರಾದ ಡಾ. ಬಸವರಾಜ ಪಾಟೀಲ್ ಅಷ್ಟೂರ, ಪದ್ಮಾಕರ ಕುಲಕರ್ಣಿ, ರೇವಣಸಿದ್ದಪ್ಪ ಜಲಾದೆ, ಡಾ.ಶ್ರೀಶೈಲ ಬಿರಾದಾರ, ಶಶಿ ಹೊಸಳ್ಳಿ ಇತರರು ಪಾಲ್ಗೊಳ್ಳುವರು.
ಎರಡು ದಿನದಲ್ಲಿ ಏಳು ಶೈಕ್ಷಣಿಕ ಅವಧಿಗಳು ನಡೆಯಲಿವೆ. 23ರಂದು ಬೆಳಗ್ಗೆ 11.45ಕ್ಕೆ ಭಾರತೀಯ ಇತಿಹಾಸ ಸಂಶೋಧನೆ ಮೈಲಿಗಲ್ಲುಗಳ ಕುರಿತು ಪ್ರೊ.ಎಂ.ಕೊಟ್ರೇಶ್, ಮಧ್ಯಾಹ್ನ 3ಕ್ಕೆ ಕಥನ ವಿಷಯ ಮೇಲೆ ಆರ್.ಎಸ್ಎಸ್ ಪ್ರಾಂತ ಪ್ರಚಾರ ಪ್ರಮುಖ ಅರುಣ್, ಸಂಜೆ 4.45ಕ್ಕೆ ಸಮಿತಿ ಧ್ಯೇಯೋದ್ದೇಶಗಳು ಕುರಿತು ಕೃಷ್ಣಮೂರ್ತಿ ಆರ್. ಹಾಗೂ 6ಕ್ಕೆ ಹಿಂದುತ್ವ-ಇತಿಹಾಸ ಕುರಿತು ಆರ್.ಎಸ್ಎಸ್ನ ರವೀಂದ್ರ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ
ಡಿ.24ರ ಬೆಳಗ್ಗೆ 9ಕ್ಕೆ ಕಲ್ಯಾಣ ಕರ್ನಾಟಕದ ಇತಿಹಾಸ, ಸಂಸ್ಕೃತಿ ಕುರಿತು ಪದ್ಮಾಕರ ಆರ್.ಕುಲಕರ್ಣಿ, 11ಕ್ಕೆ ಇತಿಹಾಸ ಸಂಶೋಧನೆ ವಿಧಾನಗಳ ಕುರಿತು ಡಾ.ಬಸವರಾಜ ಅಕ್ಕಿ ಮಾತನಾಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಗುಂಪುಗಳಲ್ಲಿ ಆಯ್ದ ವಿಷಯಗಳ ಚರ್ಚೆ, ಸಂಜೆ 4ಕ್ಕೆ ಸಮಾರೋಪ ನಡೆಯಲಿದೆ.
ದೇಶದ ಇತಿಹಾಸ ಹಾಗೂ ಸಂಸ್ಕೃತಿ ಅತ್ಯಂತ ಪುರಾತನವಾಗಿದ್ದು, ವಿಶ್ವಕ್ಕೆ ಭಾರತ ಗುರುವಿನ ಸ್ಥಾನದಲ್ಲಿದೆ. ಇದರ ಛಾಯೆ ಜಗತ್ತಿನ ಬೇರೆ ಬೇರೆ ಸಂಸ್ಕೃತಿಗಳ ಮೇಲೆ ಪ್ರಭಾವ ಬೀರಿರುವುದನ್ನು ಇತಿಹಾಸದಲ್ಲಿ ಕಾಣಬಹುದು. ಇಂಥ ಸಂಸ್ಕೃತಿಯ ನೈಜ ಇತಿಹಾಸವನ್ನು ಜನರ ಅರಿವಿಗೆ ತರುವುದು ಮತ್ತು ಮುಂದಿನ ಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಾಗಾರದ ಉದ್ಘಾಟನೆ, ಸಮಾರೋಪ ಸೇರಿ ಎರಡು ದಿನ ವಿವಿಧ ಕಾರ್ಯಕ್ರಮ ನಡೆಯಲಿವೆೆ. ರಾಷ್ಟ್ರ ಮಟ್ಟದ ಚಿಂತಕರು, ವಿದ್ವಾಂಸರು, ಸಂಶೋಧಕರು ಪಾಲ್ಗೊಂಡು ಭಾರತದ ಭವ್ಯ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಶಿಕ್ಷಣದ ಕುರಿತು ಅರ್ಥಪೂರ್ಣ ಚಿಂತನ ಮಂಡಿಸಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ.