

ಬೀದರ್: ಬೀದರ್ ವಿಮಾನ ನಿಲ್ದಾಣಕ್ಕೆ ಭಾಲ್ಕಿಯ ಹಿರೇಮಠ ಸಂಸ್ಥಾನದ ಡಾ. ಚನ್ನಬಸವ ಪಟ್ಟದ್ದೇವರ ಹೆಸರಿಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ್ ಒತ್ತಾಯಿಸಿದ್ದಾರೆ.
ಬೀದರ್ ಜಿಲ್ಲೆ, ಕಲ್ಯಾಣ ಕರ್ನಾಟಕ ಹಾಗೂ ರಾಜ್ಯಕ್ಕೆ ಡಾ. ಚನ್ನಬಸವ ಪಟ್ಟದ್ದೇವರ ಕೊಡುಗೆ ಹಿರಿದಾಗಿದೆ. ನಿಜಾಮ ಆಳ್ವಿಕೆಯಲ್ಲಿ ಈ ಭಾಗದಲ್ಲಿ ಹೊರಗೆ ಉರ್ದು ಬೋರ್ಡ್ ಹಾಕಿ, ಒಳಗೆ ಕನ್ನಡ ಕಲಿಸಿ, ಕನ್ನಡ ಭಾಷೆಯನ್ನು ಜೀವಂತವಾಗಿರಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ಡಾ. ಪಟ್ಟದ್ದೇವರು ಈ ಭಾಗದ ನಡೆದಾಡುವ ದೇವರೆಂದೇ ಹೆಸರಾಗಿದ್ದರು. ಬಡವರು, ನಿರ್ಗತಿಕರು, ಶೋಷಿತರ ಬಾಳಲ್ಲಿ ಹೊಸ ಬೆಳಕು ಮೂಡಿಸಿದ್ದರು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ರಾಂತಿ ಮಾಡಿದ್ದರು ಎಂದು ತಿಳಿಸಿದ್ದಾರೆ.
20ನೇ ಶತಮಾನದಲ್ಲಿ ಸಮಾಜದಲ್ಲಿನ ಕತ್ತಲೆ, ಜಾತಿಯತೆ, ಮೂಢನಂಬಿಕೆ, ಮೇಲು- ಕೀಳು ಭೇದ ಭಾವ ತೊಡೆದು ಹಾಕಿ ಸುಂದರ ಸಮಾಜ ನಿರ್ಮಿಸಲು ಅವಿರತ ಪ್ರಯತ್ನಿಸಿದ್ದರು. ಹೀಗಾಗಿ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಟ್ಟು ಗೌರವಿಸಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಈ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದ್ದಾರೆ.