

ಹುಮನಾಬಾದ್: ದಿ.ಬಸವರಾಜ ಪಾಟೀಲ್, ಅವರ ಪುತ್ರರಾದ ಮಾಜಿ ಸಚಿವ ರಾಜಶೇಖರ ಪಾಟೀಲ್, ಎಂಎಲ್ಸಿಗಳಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಸಹಕಾರದಿಂದಲೇ ಪಾಟೀಲ್ ಪರಿವಾರ ಕ್ಷೇತ್ರದಲ್ಲಿ ಬೆಳೆದಿರುವುದು ಹಾಗೂ ಸಮಾಜದಲ್ಲಿ ಗುರುತಿಸುವಂತಾಗಿದೆ ಎಂಬುದನ್ನು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮರೆಯಬಾರದು ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ್ ಹೇಳಿದರು.
ಅಧಿಕಾರ ಶಾಶ್ವತವಲ್ಲ. ರಾಜಕೀಯದಲ್ಲಿ ದೋಸ್ತಿ, ದುಶ್ಮನ್ ಮಾಮೂಲು. ನಾನು ಸೇರಿ ಪಾಟೀಲ್ ಕುಟುಂಬ ಯಾರಿಂದ ಬೆಳೆದಿದೆ ಎಂಬುದು ಇಡೀ ಕ್ಷೇತ್ರದ ಜನತೆಗೆ ಗೊತ್ತಿದೆ. ನಾನು, ನಮ್ಮ ಸಹೋದರರು ಕೆಲಸ ಮಾಡಿದ್ದರಿಂದಲೇ ರಾಜಶೇಖರ ಪಾಟೀಲ್ ನಾಲ್ಕು ಬಾರಿ ಶಾಸಕರಾಗಿದ್ದಾರೆ ಎಂದು ಜಂಭ ಕೊಚ್ಚಿಕೊಳ್ಳುತ್ತಿರುವ ಶಾಸಕರ ಹೇಳಿಕೆ ಹಾಸ್ಯಾಸ್ಪದ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.
ರಾಜಕೀಯದಲ್ಲಿ ಸೋಲು-ಗೆಲುವು ಸಾಮಾನ್ಯ. ನಿಮ್ಮ (ಡಾ.ಸಿದ್ದಲಿಂಗಪ್ಪ) ಬಲದ ಮೇಲೆ ರಾಜಶೇಖರ ಪಾಟೀಲ್ ರಾಜಕೀಯ ನಡೆಯುತ್ತಿದ್ದರೆ, ನೀವು ಅವರ ಜತೆ ಇಲ್ಲದಿದ್ದರೂ ಭೀಮರಾವ ಪಾಟೀಲ್ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಅಭಿಷೇಕ ಪಾಟೀಲ್ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿಲ್ವೆ ಎಂದು ಪ್ರಶ್ನಿಸಿದರು.
ದಿ.ಬಸವರಾಜ ಪಾಟೀಲ್ ಮತ್ತು ಅವರ ಪುತ್ರರು ಕ್ಷೇತ್ರದ ಜನರ ಆಶೀರ್ವಾದದಿಂದ ರಾಜಕೀಯದಲ್ಲಿ ಹಲವು ವರ್ಷಗಳಿಂದ ಜನಸೇವೆ ಮಾಡುತ್ತಿದ್ದಾರೆ. ಸಾಕಷ್ಟು ಕುಟುಂಬಗಳನ್ನು ಬೆಳೆಸಿದ್ದಾರೆ. ದಿ.ಬಸವರಾಜ ಪಾಟೀಲ್ ಹಾಗೂ ರಾಜಶೇಖರ ಪಾಟೀಲ್ ಅವರಿಂದ ಬೆಳೆದಿರುವ ನಾವೆಲ್ಲರೂ ಜನರಿಗೆ ದಾರಿ ತಪ್ಪಿಸುವುದು ಅಥವಾ ಸುಳ್ಳು ಹೇಳಿಕೆ ನೀಡಿದರೆ ಸೂರ್ಯನ ಮೇಲೆ ಉಗುಳಿದಂತಾಗುತ್ತದೆ ಎಂದರು.
ಪ್ರಮುಖರಾದ ಲಕ್ಷ್ಮಣರಾವ ಬುಳ್ಳಾ, ರಾಜಶೇಖರ ಪಾಟೀಲ್ ಮದರಗಾಂವ, ಅಫ್ಸರ್ಮಿಯಾ, ಓಂಕಾರ ತುಂಬಾ, ಬಾಬು ಟೈಗರ್, ಕಂಟೆಪ್ಪ ದಾನಾ, ಮಲ್ಲಿಕಾರ್ಜುನ ಮಹೇಂದ್ರಕರ್ ಇತರರಿದ್ದರು.
ಕಾರ್ಖಾನೆ ಹಗರಣ ತನಿಖೆ ನಡೆಸಿ
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಸೆಸ್ಕೆ) ಆರಂಭಿಸುವಂತೆ ಸರ್ಕಾರಕ್ಕೆ ಶಾಸಕರು ಒತ್ತಾಯಿಸಿರಬಹುದು. ಅಲ್ಲಿನ ಹಗರಣದ ತನಿಖೆಗೂ ಒತ್ತಡ ಹೇರಬೇಕು ಎಂದು ವೀರಣ್ಣ ಪಾಟೀಲ್ ಒತ್ತಾಯಿಸಿದರು. ಕಾರ್ಖಾನೆ ಹಗರಣದ ತನಿಖೆ ನಡೆಸಲು ಸರ್ಕಾರದ ಮೇಲೆ ಒತ್ತಡ ಹಾಕುವಂತೆ ನಾನು ಆಗ್ರಹಿಸಿದೆ. ಅದಕ್ಕೆ ಶಾಸಕರು ಸಮಂಜಸ ಉತ್ತರ ನೀಡಿಲ್ಲ ಎಂದರು. ಖಾಸಗಿಯವರಿಂದ ಹಣ ತಂದು ಕಾರ್ಖಾನೆ ನಡೆಸಲಾಗಿದೆ ಎನ್ನುತ್ತಿರುವ ಆಡಳಿತ ಮಂಡಳಿಯವರು ಯಾರಿಂದ, ಎಷ್ಟು ಹಣ ತಂದಿದ್ದಾರೆ? ಎಷ್ಟು ಬಡ್ಡಿ ಎಂಬಿತ್ಯಾದಿ ವಿಷಯ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ರೈತರು, ಕಾರ್ಮಿಕರ ಹಿತದೃಷ್ಟಿಯಿಂದ ಕಾರ್ಖಾನೆ ಹಗರಣದ ತನಿಖೆ ನಡೆಯಬೇಕು. ನಮ್ಮ ಅವಯಲ್ಲಿ ಭ್ರಷ್ಟಾಚಾರ ನಡೆದರೂ ಸಿಬಿಐ ತನಿಖೆ ನಡೆಸಿ ಎಂದು ಸವಾಲು ಹಾಕಿದರು.