

ಹುಮನಾಬಾದ್: ಜಿಲ್ಲೆ ರೈತರ ಜೀವನಾಡಿಯಾದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ)ಯನ್ನು ಸುಸೂತ್ರ ನಡೆಸುವಲ್ಲಿ ಸದ್ಯದ ಆಡಳಿತ ಮಂಡಳಿ ವಿಫಲವಾಗಿದ್ದು, ತಕ್ಷಣವೇ ಆಡಳಿತ ಮಂಡಳಿ ಸದಸ್ಯರು ನೈತಿಕ ಹೊಣೆ ಹೊತ್ತು ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ಕಾರ್ಖಾನೆ ಮಾಜಿ ನಿರ್ದೇಶಕ ಸುಭಾಷ ಗಂಗಾ ಒತ್ತಾಯಿಸಿದ್ದಾರೆ.
ಹಳ್ಳಿಖೇಡ್(ಬಿ) ಸಮೀಪದ ಬಿಎಸ್ಎಸ್ಕೆ ಆವರಣದಲ್ಲಿ ಆಯೋಜಿಸಿದ್ದ ರೈತರು ಮತ್ತು ಕಾರ್ಮಿಕರ ಸಭೆಯಲ್ಲಿ ಮಾತನಾಡಿ, ಆಡಳಿತ ಮಂಡಳಿ ವೈಫಲ್ಯದಿಂದಲೇ ಕಾರ್ಖಾನೆ ಬಂದ್ ಆಗಿದೆ. ಇದರಿಂದ ಕಬ್ಬು ಬೆಳೆಗಾರರು, ಷೇರು ಸದಸ್ಯರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಹಿತದೃಷ್ಟಿಯಿಂದ ಬಿಎಸ್ಎಸ್ಕೆ ಹೋರಾಟ ಸಮಿತಿ ರಚಿಸಲಾಗಿದೆ ಎಂದರು.
ಕಾರ್ಖಾನೆ ಆರಂಭಿಸದೆ ಆಡಳಿತ ಮಂಡಳಿ ರೈತರನ್ನು ವಂಚಿಸಿದೆ. ಈ ಆಡಳಿತ ಮಂಡಳಿ ಮಾಡಿದ ಅವ್ಯವಹಾರಗಳ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗಾಗಿ ನಿಯೋಗ ಕೊಂಡೊಯ್ಯುವುದಾಗಿ ತಿಳಿಸಿದರು.
ರೈತ ಮುಖಂಡ ಖಾಸೀಂ ಅಲಿ ಮಾತನಾಡಿ, ಬಿಎಸ್ಎಸ್ಕೆ ಉಳಿದಲ್ಲಿ ಮಾತ್ರ ರೈತರು ಮತ್ತು ಕಾರ್ಮಿಕರಿಗೆ ನೆರವಾಗಲಿದೆ. ಇದಕ್ಕಾಗಿ ಸುಭಾಷ ಗಂಗಾ ಕೈಗೊಂಡಿರುವ ತೀರ್ಮಾನಕ್ಕೆ ರೈತ ಸಂಘಟನೆ ಬೆಂಬಲವಿದೆ. ಅವರ ನೇತೃತ್ವದಲ್ಲಿ ಸಿಎಂ, ಸಕ್ಕರೆ ಸಚಿವರನ್ನು ಭೇಟಿಯಾಗಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಕೋರಲಾಗುವುದು ಎಂದು ಹೇಳಿದರು.
ಪ್ರಮುಖರಾದ ಚಂದ್ರಶೇಖರ ಪಾಟೀಲ್ ಅಲ್ಲೂರ, ಕರಬಸಪ್ಪ ಖಂಡಗೊಂಡ, ಬಸಪ್ಪ ಏಣಕೂರ, ವಿಜಯಕುಮಾರ ಆಣದೂರ, ಶಿವಪುತ್ರ ಮಾಳಗೆ, ಗೌತಮ ಸಾಗರ, ಬಸವರಾಜ ಮರಕಲ್, ನಜಿಮೊದ್ದೀನ್ ಇತರರಿದ್ದರು.