21 ದಿನದ ಮೌನಾನುಷ್ಠಾನ ಮಂಗಲ

19hbd1
Published on

ಹುಮನಾಬಾದ್: ವಿಶ್ವ ಶಾಂತಿ ಮತ್ತು ನಾಡಿನ ಒಳಿತಿಗಾಗಿ 21 ದಿನ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸ್ಥಳೀಯ ಹಿರೇಮಠದ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯರು ಕೈಗೊಂಡಿದ್ದ 12ನೇ ಮೌನಾನುಷ್ಠಾನ ಮಂಗಲಗೊಳಿಸಿ ಭಕ್ತರಿಗೆ ದರ್ಶನ ನೀಡಿದರು.
ದೇವಸ್ಥಾನದಲ್ಲಿ ಹುಡಗಿ ಹಿರೇಮಠದ ಹಿರಿಯ ಪೂಜ್ಯರಾದ ಶ್ರೀ ವಿರೂಪಾಕ್ಷ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಶ್ರೀ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ನಡೆಯಿತು. ಧಾರ್ಮಿಕ ವಿಧಾನ ನೆರವೇರಿಸಿದ ನಂತರ ರೇಣುಕಾ ಶ್ರೀಗಳು ದೇವರ ದರ್ಶನ ಮತ್ತು ಹಿರಿಯ ಶ್ರೀಗಳ ಆಶೀರ್ವಾದ ಪಡೆದು ಅನುಷ್ಠಾನ ಸಮಾಪ್ತಿಗೊಳಿಸಿದರು.
ಅನುಷ್ಠಾನ ಮುಗಿಸಿ ಹೊರಬಂದ ಪೂಜ್ಯರ ಆಶೀರ್ವಾದವನ್ನು ನೆರೆದ ಭಕ್ತರು ಪಡೆದರು. ಮಂದಿರದಿಂದ ಭಕ್ತರ ಜೈಘೋಷದೊಂದಿಗೆ ಮುಖ್ಯ ರಸ್ತೆಯಿಂದ ಹಿರೇಮಠವರೆಗೆ ಪಾದಯಾತ್ರೆ ಮೂಲಕ ಪೂಜ್ಯರನ್ನು ಕರೆದೊಯ್ಯಲಾಯಿತು. ದಾರಿಯುದ್ದಕ್ಕೂ ಪೂಜ್ಯರ ಮೇಲೆ ಪುಷ್ಪವೃಷ್ಟಿ ಮಾಡಿ ಆರತಿ ಬೆಳಗಿ ಸ್ವಾಗತ ಕೋರಲಾಯಿತು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ, ಆರ್ಯವೈಶ್ಯ ಮಹಾಸಭಾ ಜಿಲ್ಲಾಧ್ಯಕ್ಷ ದತ್ತಕುಮಾರ ಚಿದ್ರಿ, ಪುರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಸೀಗಿ, ಪ್ರಮುಖರಾದ ಬಾಬುರಾವ ಪೋಚಂಪಳ್ಳಿ, ಜಗದೀಶ ಹಿರೇಮಠ, ಮಹಾಂತೇಶ ಪೂಜಾರಿ, ಸಿದ್ದು ಚಕ್ಕಪಳ್ಳಿ, ಶರಣಯ್ಯ ಸ್ವಾಮಿ, ಸಂಜೀವಕುಮಾರ, ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net