

ಬೀದರ್: ಧಾರ್ಮಿಕ ಸಂಘ ಸಂಸ್ಥೆ ಹಾಗೂ ದೇವಸ್ಥಾನಗಳ ಜಾತ್ರಾ ರಥೋತ್ಸವಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ಒದಗಿಸಬೇಕು ಎಂದು ಬೇಮಳಖೇಡ ಹಿರೇಮಠ ಸಂಸ್ಥಾನದ ಪೂಜ್ಯಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಒತ್ತಾಯಿಸಿದರು.
ತಾಲೂಕಿನ ಕಮಠಾಣ ಗ್ರಾಮದ ಶ್ರೀ ಶರಭಾವತಾರ ವೀರಭದ್ರೇಶ್ವರರ 15ನೇ ಜಾತ್ರಾ ಮಹೋತ್ಸವ ನಿಮಿತ್ತ ಜರುಗಿದ ಮಹಾ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಜಾತ್ರೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಕೋಟ್ಯಂತರ ರೂ. ಅನುದಾನ ಒದಗಿಸುತ್ತಿರುವ ಕಾರಣಕ್ಕಾಗಿ ಸರ್ಕಾರದ ಅಧೀನದ ದೇವಸ್ಥಾನಗಳು ನಿರೀಕ್ಷೆಗೂ ಮೀರಿ ಅಭಿವೃದ್ಧಿ ಹೊಂದುತ್ತಿವೆ. ಆದರೆ ಸರ್ಕಾರೇತರ ದೇವಸ್ಥಾನಗಳು ಭಕ್ತರ ಶ್ರದ್ಧಾ, ಭಕ್ತಿಯ ಕೇಂದ್ರವಾಗಿದ್ದರೂ ಹಣಕಾಸು ಕೊರತೆ ಕಾರಣ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಧಾರ್ಮಿಕ ದತ್ತಿ ಇಲಾಖೆ ನಿಯಮಾವಳಿಗೆ ತಿದ್ದುಪಡಿ ಮಾಡಿ ಸರ್ಕಾರೇತರ ದೇವಸ್ಥಾನದ ಜಾತ್ರೆಗಳಿಗೆ ಅನುದಾನ ಬಿಡುಗಡೆಗೊಳಿಸುವ ನಿಯಮ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ರಥೋತ್ಸವದ ನಂತರ ನಡೆದ ಧರ್ಮ ಸಮಾರಂಭ ಹಾರಕೂಡನ ಪೂಜ್ಯಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಮಾತಾ ಅಮೃತಾನಂದಮಯಿ ಬೆಳ್ಳೂರು ನೇತೃತ್ವ ವಹಿಸಿದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷ ಕುಶಾಲರಾವ ಯಾಬಾ, ಮುಖಂಡರಾದ ಶಿವರಾಜ ಪಾಟೀಲ್, ಕಾಶೀನಾಥ ಬೆಲ್ದಾಳೆ, ಕಲ್ಯಾಣರಾವ ಬಿರಾದಾರ, ಶಾಂತಯ್ಯಾ ಸ್ವಾಮಿ, ಪ್ರಭುಶೆಟ್ಟಿ ಯಾಬಾ, ಸತೀಶ್ ಯಾಬಾ, ಸಿದ್ದಯ್ಯಾ ಸ್ವಾಮಿ, ಓಂಕಾರ ಸ್ವಾಮಿ, ರಾಜು ಯಾಬಾ, ಮಾಣಿಕ ಯಾಬಾ ಇತರರಿದ್ದರು. ಹಾಸ್ಯ ಕಲಾವಿದರಾದ ನವಲಿಂಗ ಪಾಟೀಲ್ ಮತ್ತು ರೇವಣಸಿದ್ದಯ್ಯ ಸ್ವಾಮಿ ಹುಮನಾಬಾದ್ ತಂಡದಿಂದ ಸಂಗೀತ ರಸಮಂಜರಿ ನಡೆಯಿತು.