

ಔರಾದ್: ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ (ಎನ್ಎಸ್.ಯುಐ) ವಿದ್ಯಾರ್ಥಿಗಳ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಯುವ ಸಮೂಹಕ್ಕೆ ಅನ್ಯಾಯವಾದರೆ ಹೋರಾಟ ಮಾಡುವುದು ಸಂಘಟನೆ ಧ್ಯೇಯವಾಗಿದೆ ಎಂದು ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಒಕ್ಕೂಟದ ತಾಲೂಕು ಘಟಕ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ನ ಶಕ್ತಿಯುತ ಸಂಘಟನೆ ಇದಾಗಿದೆ. ರಾಜಕೀಯದಲ್ಲಿ ಪರಿಶುದ್ಧತೆ ತರಲು ಯುವಕರಿಗೆ ನ್ಯಾಯ ಒದಗಿಸುವುದು ನಮ್ಮ ಗುರಿ. ರಾಜ್ಯದಲ್ಲಿ ಸಂಘಟನೆ ಯುವಕರ ಧ್ವನಿಯಾಗುವ ಜತೆಗೆ ಸಮಾಜದಲ್ಲಿ ಸೌಹಾರ್ದ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.
ಪ್ರತಿ ಕಾಲೇಜಿನಲ್ಲಿ ಒಕ್ಕೂಟ ರಚಿಸಿ ಪದಾಧಿಕಾರಿಗಳ ನೇಮಕ ಮಾಡಬೇಕು. ವಿದ್ಯಾರ್ಥಿಗಳು ದಶ್ಚಟಗಳಿಂದ ದೂರವಿದ್ದು, ಸಮಾಜ ಮತ್ತು ದೇಶ ಸೇವೆಯಲ್ಲಿ ತೊಡಗಬೇಕು. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಒಕ್ಕೂಟ ಜಿಲ್ಲಾಧ್ಯಕ್ಷ ಸಚಿನ್ ಮಲ್ಕಾಪುರೆ ಮಾತನಾಡಿದರು. ತಾಲೂಕು ಅಧ್ಯಕ್ಷ ಚಂದು ಡಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬುರ್ಗೆ, ಪಪಂ ಸದಸ್ಯ ಸುನೀಲಕುಮಾರ ದೇಶಮುಖ, ಪ್ರಶಾಂತ ಫುಲಾರಿ, ಸುಧಾಕರ ಕೊಳ್ಳುರ್, ರತ್ನದೀಪ ಕಸ್ತೂರೆ, ಸತೀಶ ಫುಲಾರಿ, ದತ್ತು ಬಾಪುರೆ, ರಾಹುಲ್ ಜಾಧವ್, ಹರಿದೇವ ಸಂಗನಾಳ ಇತರರಿದ್ದರು.
ಸ್ಟುಡೆಂಟ್ಸ್ ಜತೆ ಸಂವಾದ
ಕಾರ್ಯಕ್ರಮ ನಂತರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳ ಜತೆ ನೇರ ಸಂವಾದದಲ್ಲಿ ಸಾಗರ ಖಂಡ್ರೆ ಭಾಗವಹಿಸಿ ಮಾತನಾಡಿದರು. ಕಾಯಂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತಿರುವ ಕಾರಣ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಖಂಡ್ರೆ ಎದುರು ಅಳಲು ತೋಡಿಕೊಂಡರು. ಸಮಸ್ಯೆ ಕುರಿತು ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರ ಗಮನಕ್ಕೆ ತಂದು ಬಗೆಹರಿಸಲು ಪ್ರಯತ್ನಿಸುವೆ ಎಂದು ಖಂಡ್ರೆ ಭರವಸೆ ನೀಡಿದರು. ನಂತರ ಅಮರೇಶ್ವರ ಪದವಿಪೂರ್ವ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.